ಜಾಗೃತಿ ಜಾಥಾಕ್ಕೆ ಸಿಇಓ ಚಾಲನೆ
ಹಾಸನ

ಜಾಗೃತಿ ಜಾಥಾಕ್ಕೆ ಸಿಇಓ ಚಾಲನೆ

August 2, 2018

ಹಾಸನ: ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಜಾಗೃತಿ ಜಾಥಾಕ್ಕೆ ಜಿಪಂ ಸಿಇಓ ಜಿ.ಜಗದೀಶ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಹಾಸನ ಜಿಲ್ಲೆ ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಗುರುತಿಸಲ್ಪಟ್ಟಿದ್ದು, ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಜನಾಂದೋಲನದಲ್ಲೂ ಸಂಪೂರ್ಣ ಯಶಸ್ವಿಯಾಗಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಜಿಲ್ಲೆಯ ಎಲ್ಲಾ ಹಳ್ಳಿಗಳು ಸಂಪೂರ್ಣ ನೈರ್ಮಲ್ಯಗೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶೇಷ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು `ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018 ಜನಾಂದೋಲನ ಆಯೋಜಿಸಿದೆ. ಸಾಕಷ್ಟು ನಾಗರಿಕರು ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಶುಚಿತ್ವ, ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯ ದಲ್ಲಿ ಅರಿವು ಮೂಡಿಸುವುದು ಈ ಸರ್ವೇಕ್ಷಣೆಯ ಉದ್ದೇಶವಾಗಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ನಿಯತಾಂಕಗಳಲ್ಲಿ ಸಾಧಿಸಿದ ಕಾರ್ಯ ಕ್ಷಮತೆ ಆಧಾರದ ಮೇಲೆ ಸಮಗ್ರ ಶುಚಿತ್ವ ವನ್ನು ಸಾಧಿಸಿದ ರಾಜ್ಯ/ಜಿಲ್ಲೆಗಳಿಗೆ ಶ್ರೇಣಿ ನೀಡಲಾಗುವುದು. ಅದರಲ್ಲಿ ಉತ್ತಮ ಸಾಧನೆ ತೋರುವುದು ನಮ್ಮ ಗುರಿ ಯಾಗಿದೆ ಎಂದು ತಿಳಿಸಿದರು.

ಹಾಸನ ಜಿಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಇಂದಿನಿಂದ. 31ರ ವರೆಗೆ ಸಮೀಕ್ಷೆ ನಡೆಯಲಿದೆ. ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣದ ಯಶಸ್ವಿಗೆ ಎಲ್ಲರ ಸಹ ಭಾಗಿತ್ವ ಮುಖ್ಯವಾಗಿದ್ದು, ಸಾರ್ವಜನಿಕರು ಇದರಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಈ ವೇಳೆ ಜಿಪಂ ಉಪಕಾರ್ಯದರ್ಶಿ ಉಮೇಶ್ ಮತ್ತು ಯೋಜನಾ ನಿರ್ದೇಶಕ ಡಿ.ವಿ.ಆರುಣ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ವಿನೋದ್‍ಚಂದ್ರ ಹಾಜರಿದ್ದರು.

Translate »