ವಿಶ್ವ ಯೋಗದ ದಿನದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಭಾಗಿ
ಮೈಸೂರು

ವಿಶ್ವ ಯೋಗದ ದಿನದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಭಾಗಿ

June 11, 2018
  •  ಜೂ.17ರಂದು ಮತ್ತೊಂದು ತಾಲೀಮು
  • ಜೂ.21ರಂದು ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನ
  • ಲಕ್ಕಿ ಡಿಪ್‍ನಲ್ಲಿ 10 ಮಂದಿಗೆ ಲಭಿಸಲಿದೆ ಪ್ರಶಸ್ತಿ

ಮೈಸೂರು:  ಈ ಬಾರಿಯೂ ವಿಶ್ವಯೋಗ ದಿನದಂದು ಬೃಹತ್ ಪ್ರದರ್ಶನ ನೀಡಿ ಕಳೆದ ವರ್ಷ ಮಾಡಿರುವ ಗಿನ್ನಿಸ್ ದಾಖಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಜಿಲ್ಲಾಡಳಿತ ಜೂ.21ರಂದು ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ಒಂದು ಲಕ್ಷ ಯೋಗಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಭಾನುವಾರ ಅರಮನೆಯ ಆವರಣದಲ್ಲಿ ನಡೆದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಗಮನ ಸೆಳೆದರು.

ಮೈಸೂರಿನ ಅರಮನೆಯ ಆವರಣದಲ್ಲಿ ಇಂದು ಜಿಲ್ಲಾಡಳಿತ, ಆಯೂಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಗ್ಗೆ ಅರಮನೆಯ ಆವರಣದಲ್ಲಿ ಆಯೋಜಿಸಿದ್ದ ಯೋಗ ತಾಲೀಮಿನಲ್ಲಿ ಆಯಿಷ್ ಇಲಾಖೆ, ಎಸ್‍ಪಿವೈಎಸ್‍ಎಸ್, ಜಿಎಸ್‍ಎಸ್ ಯೋಗಿಕ್ ಫೌಂಡೇಶನ್, ಪಂಜಲಿ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ ಫೌಂಡೇಷನ್ ಸಂಸ್ಥೆಯ 2500ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ವಿವಿಧ ಯೋಗಾಸನ ಪ್ರದರ್ಶನ ನೀಡಿ `ವಿಶ್ವ ಯೋಗ ದಿನ’ದ ಪ್ರದರ್ಶನಕ್ಕೆ ಬದ್ದರಾಗಿರುವ ಸಂದೇಶ ಸಾರಿದರು.

ಇಂದು ಬೆಳಗ್ಗೆ 6ಕ್ಕೆ ಆರಂಭವಾದ ತಾಲೀಮಿನಲ್ಲಿ ಯೋಗಪಟುಗಳು ನಿಯಮಾನುಸಾರ ಒಂದು ನಿಮಿಷ ಪ್ರಾರ್ಥನೆ, ನಂತರ ನಾಲ್ಕು ನಿಮಿಷಗಳ ಕಾಲ ಯೋಗಾಸನಕ್ಕೆ ಪೂರಕವಾದ 17 ಬಗೆಯ ವ್ಯಾಯಾಮ ಮಾಡಿದರು. ಬಳಿಕ 25 ನಿಮಿಷಗಳ ಕಾಲ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಖಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಸೇರಿದಂತೆ ಇನ್ನಿತರ 19 ಆಸನಗಳನ್ನು ಪ್ರದರ್ಶಿಸಿದರು. ನಂತರ 14 ನಿಮಿಷಗಳ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಯಾಮ, ಶೀಥಲೀ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಮೂಲಕ ಮೊದಲ ತಾಲೀಮನ್ನು ಪೂರ್ಣಗೊಳಿಸಿದರು.

ಮತ್ತೊಂದು ತಾಲೀಮು: ಈ ಬಾರಿಯ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೂ.17 ರಂದು ಬೆಳಗ್ಗೆ 6ಕ್ಕೆ ತಾಲೀಮು ನಡೆಸುವುದಕ್ಕೆ ನಿರ್ಧರಿಸಲಾಯಿತು. ಅಂದು ನಡೆಯಲಿರುವ ತಾಲೀಮಿನಲ್ಲಿ ಯೋಗ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೂ.21ರಂದು ನಡೆಯಲಿರುವ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಾಗಲೇ ನಾಲ್ಕು ಸಾವಿರ ಮಂದಿ ನೊಂದಾಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇಂದು ನಡೆದ ತಾಲೀಮಿನಲ್ಲಿ ಆಯಷ್ ಇಲಾಖೆಯ ನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು, ನೆಹರು ಯುವ ಕೇಂದ್ರದ ಸಂಯೋಜಕ ಎಂ.ಎನ್.ನಟರಾಜ್, ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ.ಮಂಜುನಾಥ್, ಕಾಡ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್, ಹೊಟೇಲ್ ಮಾಲೀಕರ ಸಂಘದ ಕಾರ್ಯದರ್ಶಿ ಎ.ಸಿ.ರವಿ, ಎಸ್‍ಪಿವೈಎಸ್ ಮುಖ್ಯಸ್ಥ ಡಾ.ಮಾರುತಿ, ಜಿಎಸ್‍ಎಸ್ ಯೋಗಿಕ್ ಶ್ರೀಹರಿ, ರಂಗನಾಥ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಶಾಂತರಾಮು, ಮೈಸೂರು ಯೋಗ ಸ್ಪೋಟ್ರ್ಸ್ ಕ್ಲಬ್‍ನ ಮುಖ್ಯಸ್ಥರು ಡಾ.ಗಣೇಶ್ ಕುಮಾರ್, ಪತಂಜಲಿಯ ಸಂಸ್ಥೆಯ ರತ್ನರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »