ಪಾಕ್‍ನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ
ಮೈಸೂರು

ಪಾಕ್‍ನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ

February 27, 2019
  •  ಮಂಗಳವಾರ ನಸುಕಿನ 3.30ರಲ್ಲಿ 21 ನಿಮಿಷಗಳ ಸರ್ಜಿಕಲ್ ಸ್ಟ್ರೈಕ್-2
  • ಭಾರತದ ವಾಯುಪಡೆ ದಾಳಿಗೆ ಜೈಷ್ ಉಗ್ರರ 3 ಪ್ರಮುಖ ನೆಲೆಗಳು ಧ್ವಂಸ
  •  350 ಉಗ್ರರು ಬಲಿ, ಅಪಾರ ಶಸ್ತ್ರಾಸ್ತ್ರ, ಜೈಷ್ ನಿಯಂತ್ರಣ ಕೊಠಡಿ ನಾಶ

ನವದೆಹಲಿ: ಪುಲ್ವಾಮಾ ದಾಳಿ ನಡೆದ 12 ದಿನಗಳಲ್ಲಿಯೇ ಭಾರತ ದೊಡ್ಡ ಮಟ್ಟದಲ್ಲಿಯೇ ಪ್ರತೀಕಾರ ತೀರಿಸಿಕೊಂಡಿದೆ. ನೆರೆಯ ಭಯೋತ್ಪಾದಕ ದೇಶ ಪಾಕಿಸ್ತಾನ ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಗಡಿ ದಾಟಿ ಪಾಕಿಸ್ತಾನದಲ್ಲಿ ಸುರಕ್ಷಿತ ನೆಲೆ ಕಂಡು ಕೊಂಡಿರುವ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿರುವ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು 350ಕ್ಕೂ ಅಧಿಕ ಉಗ್ರರನ್ನು ಬಲಿ ಹಾಕಿವೆ. ಕೇವಲ 21 ನಿಮಿಷಗಳ ಸರ್ಜಿಕಲ್ ಸ್ಟ್ರೈಕ್-2 ಕಾರ್ಯಾಚರಣೆ ಭಾರತದ ಪಾಲಿಗೆ ದೊಡ್ಡ ಜಯ ತಂದುಕೊಟ್ಟಿದ್ದರೆ, ಪಾಕ್ ಪಾಲಿಗೆ ನುಂಗ ಲಾರದ ತುತ್ತಾಗಿ ಪರಿಣಮಿಸಿದೆ.

ಪ್ರತೀಕಾರ: ಫೆ.14ರಂದು ಪುಲ್ವಾಮಾದಲ್ಲಿ ಭಾರ ತೀಯ ಸೈನಿಕರ ವಾಹನಗಳ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಪಾಕ್ ಮೂಲದ ಜೈಷ್ ಇ ಮೊಹ ಮ್ಮದ್ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಂದು ಘೋಷಿಸಿದಂತೆಯೇ ಭಾರತೀಯ ಭದ್ರತಾ ಪಡೆಗಳು ಇಂದು ಭಯೋತ್ಪಾದಕರನ್ನು ಸಲಹುತ್ತಿ ರುವ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿವೆ. ಭಾರತೀಯ ವಾಯುಪಡೆ ವಿಮಾನಗಳು ಪಾಕ್‍ನೊಳಕ್ಕೆ ನುಗ್ಗಿ 3 ಪ್ರಮುಖ ಉಗ್ರ ನೆಲೆಗಳನ್ನು ನಾಶ ಮಾಡಿವೆ ಎಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಖೈಬರ್ ಪಖ್ತೂನ್‍ವಾ ಪ್ರಾಂತ್ಯ ದವರೆಗೂ ಸಾಗಿದ್ದ ಭಾರತದ 12 ಯುದ್ಧ ವಿಮಾನ ಗಳು ಯೋಜಿತ ರೀತಿಯಲ್ಲಿಯೇ ದಾಳಿ ನಡೆಸಿವೆ. ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನೆಲದಲ್ಲಿ ನೆಲೆಗೊಳಿ ಸಿದ್ದ ಬಾಲಕೋಟ್, ಚಕೋಟಿ, ಮುಜಾಫರಬಾದ್‍ನ ನೆಲೆಗಳು, ತರಬೇತಿ ಕೇಂದ್ರಗಳು, ಲಾಂಚ್ ಪ್ಯಾಡ್ ಗಳನ್ನು ಸರ್ಜಿಕಲ್ ಸ್ಟ್ರೈಕ್-2 ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ನಾಶ ಮಾಡಲಾಗಿದೆ.

ದಾಳಿ ವೈಖರಿ: ಮಂಗಳವಾರ ನಸುಕಿನ 3.30ರ ವೇಳೆಗೆ ಕಾರ್ಯಾಚರಣೆ ಆರಂಭಿಸಿದ ಮಿರಾಜ್ 2000 ದರ್ಜೆಯ 12 ವಿಮಾನಗಳು ಪಾಕ್‍ನ ರಾಡಾರ್‍ಗಳಿಗೂ ಸುಳಿವು ಸಿಗದಂತೆ ಪಾಕ್‍ನ ಖೈಬರ್ ಪಖ್ತೂನ್‍ವಾ ಪ್ರಾಂತ್ಯದಲ್ಲಿದ್ದ ಬಾಲಕೋಟ್‍ವರೆಗೂ ತೆರಳಿದ್ದವು. ಒಟ್ಟು ಉಗ್ರರ 3 ನೆಲೆಗಳನ್ನು ಗುರಿಯಾಗಿರಿಸಿ 1 ಸಾವಿರ ಕೆಜಿಯಷ್ಟು ಬಾಂಬ್‍ಗಳನ್ನು ಹಾಕಿದವು. ಒಟ್ಟು 21 ನಿಮಿಷಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ಹನ್ನೆರಡೂ ವಿಮಾನಗಳು ಸುರಕ್ಷಿತವಾಗಿ ಭಾರತದ ವಾಯುನೆಲೆಗೆ ವಾಪಸಾದವು.

ಪಾಕ್ ಖಂಡನೆ: ಉಗ್ರನೆಲೆಗಳ ಮೇಲಿನ ಹಠಾತ್ ದಾಳಿಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ತಕ್ಷಣವೇ ಸಂಪುಟ ಸಭೆ ನಡೆಸಿದ್ದಾರೆ. ಭಾರತದ ವೈಮಾನಿಕ ದಾಳಿಯನ್ನು ಪಾಕ್ ತೀವ್ರವಾಗಿ ಖಂಡಿಸಿದೆ.

ಪಾಕ್‍ನತ್ತ ನಿಗಾ: ಭಾರತದ ಈ 2ನೇ ಸರ್ಜಿಕಲ್ ದಾಳಿಯಿಂದ ತತ್ತರಿಸಿರುವ ಪಾಕ್ ಪ್ರತಿದಾಳಿ ನಡೆಸಬಹುದೆಂಬ ಶಂಕೆಯಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳಿಗೆ ಪೂರ್ಣ ಸಜ್ಜಾಗಿರುವಂತೆ ಸೂಚಿಸಲಾಗಿದೆ. ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ಭಾರತದ ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ ಪರಿಣಾಮ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದು, ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವೇಷಮಯ ವಾತಾವರಣ ಸೃಷ್ಟಿಯಾಗಿದೆ.
ರಾಯಭಾರಿಗಳಿಗೆ ಮಾಹಿತಿ: ಈ ಮಧ್ಯೆ, ಪಾಕ್ ಮೇಲಿನ ವೈಮಾನಿಕ ದಾಳಿ ಕುರಿತು ವಿದೇಶಾಂಗ ಕಾರ್ಯದರ್ಶಿಗಳು ಭಾರತದಲ್ಲಿನ ವಿವಿಧ ದೇಶಗಳ ರಾಯಭಾರ ಕಚೇರಿಯಲ್ಲಿನ ರಾಯಭಾರಿಗಳಿಗೆ ವಿವರ ನೀಡಿದರು.

Translate »