ಅಂಗವಿಕಲತೆಯಿಂದ ಪಾರಾಗಿ ಎಲ್ಲರಂತೆ ಸಹಜವಾಗಿ ನಡೆದಾಡುತ್ತಿರುವ ಯುವಕ ಪವನ್‍ಕುಮಾರ್
ಮೈಸೂರು

ಅಂಗವಿಕಲತೆಯಿಂದ ಪಾರಾಗಿ ಎಲ್ಲರಂತೆ ಸಹಜವಾಗಿ ನಡೆದಾಡುತ್ತಿರುವ ಯುವಕ ಪವನ್‍ಕುಮಾರ್

September 8, 2018

ಮೈಸೂರು:  12 ವರ್ಷಗಳ ಹಿಂದೆ ಬಿದ್ದು ಬಲಗಾಲಿನ ತೊಡೆಯ ಮೂಳೆ ಮುರಿತದಿಂದ ಕಂಗಾಲಾಗಿದ್ದ ಯುವಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಆತ ಸಹಜವಾಗಿ ನಡೆದಾಡುವಂತೆ ಮಾಡುವಲ್ಲಿ ಮೈಸೂರಿನ ಕೀಲು ಮತ್ತು ಮೂಳೆ ತಜ್ಞ ಡಾ.ಟಿ.ಮಂಜುನಾಥ್ ಯಶಸ್ವಿಯಾಗಿದ್ದಾರೆ.

ಕೃಷ್ಣರಾಜಸಾಗರದ ಪವನ್‍ಕುಮಾರ್ (17) 5 ವರ್ಷದ ಬಾಲಕನಾಗಿದ್ದಾಗ ಬಿದ್ದು ತೊಡೆಗೆ ಪೆಟ್ಟಾಗಿತ್ತು. ಮೂಳೆ ಮುರಿದಿತ್ತು. 3 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಸರಿಯಾಗಿ ಮೂಳೆಗಳು ಬೆಳವಣಿಗೆಯಾಗದೆ 20 ಸೆಂಟಿಮೀಟರ್‍ನಷ್ಟು ಕಾಲು ಬೆಳೆಯದೇ ಅಂಗವೈಕಲ್ಯತೆಗೆ ಒಳಗಾಗಿದ್ದ. ಪೇಯಿಂಟಿಂಗ್ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಆತನ ತಂದೆ ಕುಮಾರ್ ಅವರು ಆರ್ಥಿಕ ಮುಗ್ಗಟ್ಟಿನಿಂದಾಗಿ ಚಿಕಿತ್ಸೆ ಕೊಡಿಸಲಾಗಲಿಲ್ಲ. ಆದರೆ ನೋವಿನ ನಡುವೆಯೂ ಆತ ಎಸ್‍ಎಸ್‍ಎಲ್‍ಸಿ ಪೂರೈಸಿದ್ದ. ಎರಡು ವರ್ಷಗಳ ಹಿಂದೆ ಇವರು ಮಾನಸ ಆಸ್ಪತ್ರೆಗೆ ಬಂದಾಗ, ಮೂಳೆ ಬೆಳೆಯಲು ಶಸ್ತ್ರಚಿಕಿತ್ಸೆ ಅಗತ್ಯವಿರುವುದು ತಿಳಿಯಿತು. ಅದಕ್ಕೆ 2.5 ಲಕ್ಷದಿಂದ 6 ಲಕ್ಷದವರೆಗೆ ವೆಚ್ಚವಾಗಲಿದೆ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಕಂಡು ಮಾನವೀಯತೆಯ ಆಧಾರದಲ್ಲಿ 95 ಸಾವಿರ ರೂ.ಗಳಲ್ಲಿ ಇಲಿಜರೋವ್ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇಂದು ಯುವಕ ಪವನ್ ಸಹಜವಾಗಿ ನಡೆದಾಡುವಷ್ಟು ಸಮರ್ಥರಾಗಿದ್ದಾರೆ ಎಂದು ಡಾ.ಟಿ. ಮಂಜುನಾಥ್ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶಸ್ತ್ರಚಿಕಿತ್ಸೆಯ ವಿವರಗಳನ್ನು ನೀಡಿದರು.

2016ರಲ್ಲಿ ಸತತ 10 ಗಂಟೆಗಳ ಕಾಲ ದಕ್ಷಿಣ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಇಲಿಜಿರೋವ್ ತಂತ್ರಜ್ಞಾನ ಬಳಸಿ ಈ ಚಿಕಿತ್ಸೆ ನೆರವೇರಿಸಲಾಗಿದೆ. 20 ಸೆಂಟಿಮೀಟರ್‍ನಷ್ಟು ಬೆಳೆದು ಈಗ ಎರಡೂ ಕಾಲುಗಳು ಸಹಜವಾಗಿ ಸಮನಾಗಿವೆ. ಈತ ಸಹಜ ವಾಗಿ ನಡೆದಾಡುತ್ತಿದ್ದಾನೆ ಎಂದು ಹೇಳಿದರು.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪವನ್‍ಕುಮಾರ್, ಕಾಲು ಊನವಾಗಿ ನೋವು ಅನುಭವಿಸುತ್ತಿದ್ದೆ. ಎಸ್‍ಎಸ್‍ಎಲ್‍ಸಿ ವರೆಗೂ ಓದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೇನೆ. ಡಾ. ಮಂಜ ನಾಥ್ ಅವರ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಸಹಜವಾಗಿ ಎಲ್ಲರಂತೆ ನಡೆದಾಡಲು ಆಗಿರುವುದಕ್ಕೆ ಸಂತೋಷವಾಗಿದೆ ಎಂದು ತಮ್ಮ ಅನುಭವನವನ್ನು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಎಸ್. ರಘುನಂದನ್, ಯುವಕನ ತಾಯಿ ಸುನಂದಾ ಉಪಸ್ಥಿತರಿದ್ದರು.

Translate »