`ಡಿಸ್ನಿಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ
ಮಂಡ್ಯ

`ಡಿಸ್ನಿಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ

July 26, 2018

ಮಂಡ್ಯ:  ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ‘ಡಿಸ್ನಿ ಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಿಸಲು ಸರ್ಕಾರ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಕೆಆರ್‌ಎಸ್‌ಗೆ ಭೇಟಿ ಪರಿಶೀಲನೆ ನಡೆಸಿದರು.

ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿ ಯಲ್ಲೇ ಕೆಆರ್‌ಎಸ್‌ ಬೃಂದಾವನವನ್ನು ಅಭಿವೃದ್ಧಿಪಡಿಸಲು ಬಜೆಟ್‍ನಲ್ಲಿ ಘೋಷಣೆ ಯಾಗಿದೆ, ಇದಕ್ಕಾಗಿ 5 ಕೋಟಿ ರೂ. ಗಳನ್ನೂ ಸಹ ಘೋಷಣೆ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೊಳಿಸಲು ಸಿದ್ದತೆ ನಡೆದಿದೆ ಎಂದು ಅಧಿಕಾರಿಗಳ ಸಭೆಯ ಬಳಿಕ ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ನೀಲನಕ್ಷೆ ತಯಾರಿಗೆ ಸೂಚನೆ: ಕೆಆರ್‌ಎಸ್‌ನ ಉತ್ತರ ಮತ್ತು ದಕ್ಷಿಣ ಬೃಂದಾವನದಲ್ಲಿ ಪರಿಶೀಲನೆ ನಡೆಸಲಾಗಿದೆ. ಸದ್ಯಕ್ಕೆ ಬೃಂದಾವನದಲ್ಲಿ 185 ಎಕರೆ ಮಾತ್ರ ಲಭ್ಯವಿದೆ. ಅಧಿಕಾರಿಗಳ ಮಾಹಿತಿಯ ಪ್ರಕಾರ ಒಟ್ಟು 500 ಎಕರೆ ಜಾಗ ಕೆಆರ್‌ಎಸ್‌ ಅಣೆಕಟ್ಟೆ ವ್ಯಾಪ್ತಿಗೆ ಸೇರಿದ್ದಾಗಿದೆ, ಆದರೆ, ಕಟ್ಟೆಯ ಆಜುಬಾಜಿನಲ್ಲಿ ಒತ್ತುವರಿಯಾಗಿದೆ. ಈ ಜಾಗವನ್ನು ಅಳತೆ ಮಾಡಿ ಅದರ ಸ್ಕೆಚ್ ತಯಾರಿಸಿ ಕೊಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಈಗಾಗಲೆ ಸೂಚಿಸಿದ್ದೇನೆ ಎಂದರು.

ಬೃಂದಾವನವೂ ಸೇರಿದಂತೆ ಸುಮುತ್ತಲಿನ ಜಾಗವವನ್ನೆಲ್ಲಾ ಸೇರಿಸಿ ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸಬೇಕು. ಈ ಸಂಬಂಧ ನೀಲನಕ್ಷೆ ತಯಾರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಯೋಜನೆಗೆ ಬೇಕಾದ ಜಾಗದ ಬಗ್ಗೆ ಸಿಎಂ ಕುಮಾರಸ್ವಾಮಿ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಇನ್ನು ಬೃಂದಾವನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನ ಗೊಳಿಸಲಾಗುವುದು. ಈ ಮೂಲಕ ಮತ್ತೆ ಬೃಂದಾವನದ ಗತ ವೈಭವ ಮರುಕಳಿಸುವಂತೆ ಮಾಡಲಾಗುವುದು. ಬೃಂದಾವನವನ್ನು ಆಕರ್ಷಣೀಯ ತಾಣವನ್ನಾಗಿ ಮಾಡುವುದರ ಮೂಲಕ ಪ್ರವಾಸಿಗರನ್ನು ಸೆಳೆಯುವಂತೆ ಮಾಡಬೇಕಿದೆ. ಅಂತೆಯೇ, ಸದ್ಯ ಅಣೆ ಕಟ್ಟೆಯ ಭದ್ರತೆ ದೃಷ್ಟಿಯಿಂದ ಪ್ರವಾಸಿ ಗರಿಗೆ ಕೆಲ ನಿರ್ಬಂಧ ವಿಧಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಿಎಂ ಜೊತೆ ಮಾತನಾಡಿ, ಪ್ರವಾಸಿಗರಿಗೆ ಅಣೆಕಟ್ಟೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಎಂ.ಡಿ.ಕುಮಾರ್ ಪುಷ್ಕರ್, ಕಾವೇರಿ ನೀರಾವರಿ ನಿಗಮದ ಕಾರ್ಯ ಪಾಲಕ ಅಭಿಯಂತರ ಬಸವರಾಜೇಗೌಡ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜು, ಉಪನಿರ್ದೇಶಕ ರಾಜು, ಹಿರಿಯ ನಿರ್ದೇಶಕಿ ಅಬೀಬಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಇತರರಿದ್ದರು.

ದಸರಾಗೆ ಭರ್ಜರಿ ಸಿದ್ಧತೆ

ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೃಂದಾವನವನ್ನು ಆಕರ್ಷಣೆಯ ತಾಣವನ್ನಾಗಿ ರೂಪಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳಿಗೆ ಸೂಚಿಸಿದರು. ಗಿಡಗಳ ಸೌಂದರ್ಯ ಹೆಚ್ಚಿಸುವುದರ ಜೊತೆಗೆ, ಗಾಜಿನ ಮನೆ ಮತ್ತು ಎರಡು ಉದ್ಯಾನವನ್ನು ಆಕರ್ಷಣಿಯ ತಾಣ ಮಾಡಬೇಕು. ಈ ಹಿನ್ನೆಲೆಯಲ್ಲಿ ದೀಪಗಳ ಆಕರ್ಷಕ ಅಲಂಕಾರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗುವುದು. ಇನ್ನು ಬೃಂದಾವನದಲ್ಲಿ ವಿದ್ಯುತ್ ಅಲಂಕಾರದ ಕೊರತೆ ಇದ್ದು, ಈ ಬಗ್ಗೆ ಪ್ರವಾಸಿಗರ ನಿರಾಸೆ ಇದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಲಾಗುವುದು. ಈ ಮೂಲಕ ದಸರಾ ವೇಳೆಗೆ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು ಎಂದು ತಿಳಿಸಿದರು.

Translate »