ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಭಿಮತ
ಮೈಸೂರು

ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಭಿಮತ

September 19, 2018

ನಂಜನಗೂಡು: ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ಅವರು ನಗರದ ಕಬಿನಿ ಹೋಟೆಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 68ನೇ ಹುಟ್ಟುಹಬ್ಬದ ಅಂಗವಾಗಿ ಪೌರ ಕಾರ್ಮಿಕರಿಗೆ ಭೋಜನದ ವ್ಯವಸ್ಥೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದರು. ಇಂದಿರಾ ಗಾಂಧಿ ಗರೀಭಿ ಹಠಾವೋ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿರವರು ಸ್ವಚ್ಛತೆಯ ಮಂತ್ರವನ್ನು ಜಪಿಸುತ್ತಾ ಅಧಿಕಾರಕ್ಕೆ ಬಂದವರು. ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದಲ್ಲದೆ ದೇಶದ ಆರ್ಥಿಕ ಸುಭದ್ರತೆಯೊಂದಿಗೆ ವಿಶ್ವದಲ್ಲೇ ಮುಂಚೂಣಿಗೆ ತರಲು ಶ್ರಮಿಸಿದವರು ಎಂದರು.

ಅವರ ಅಭಿವೃದ್ಧಿ ಕಾರ್ಯಕ್ರಮಗಳಿಂದ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿ ಬರಲಿದ್ದಾರೆ ಎಂದು ಭವಿಷ್ಯ ನುಡಿದರು.
ಮೋದಿ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನಲ್ಲಿ 5 ದಿನಗಳು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮೊದಲ ದಿನ ಪೌರ ಕಾರ್ಮಿಕರಿಗೆ ಭೋಜನದ ವ್ಯವಸ್ಥೆ ಮಾಡಿ ಅವರ ಬೀದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡುವುದು. ನಂತರ ತಾಲೂಕಿನಾದ್ಯಂತ 4 ದಿನಗಳ ಕಾಲ ಸ್ವಚ್ಛತೆಯ ಕಾರ್ಯವನ್ನು ನಡೆಸುವುದು. ಸ್ವಚ್ಛತೆಗೆ ಪೌರ ಕಾರ್ಮಿಕರ ಶ್ರಮವೇ ಕಾರಣ. ಆದ್ದರಿಂದ ಅವರಿಗೆ ಬಾಕಿ ಇರುವ ವೇತನ ಬಿಡುಗಡೆಗೆ ಕ್ರಮವಹಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಖಂಡರಾದ ಯು.ಎನ್.ಪದ್ಮನಾಭರಾವ್ ಮಾತನಾಡಿ, ವಿಶ್ವದಲ್ಲೇ ಅತ್ಯಂತ ಪ್ರಭಾವಿ ಪ್ರಧಾನಿಗಳಲ್ಲಿ ಮೋದಿರವರು ಒಬ್ಬರಾಗಿದ್ದು, ಅವರ ಜನಪರ ಕಾರ್ಯಕ್ರಮಗಳಿಂದ ಬಿಜೆಪಿ ರಾಜ್ಯದಲ್ಲಿ 15ಕ್ಕಿಂತಲೂ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದರು .

ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಬಾಲಂದ್ರು, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಚಿಕ್ಕರಂಗನಾಯ್ಕ, ಮುಖಂಡರಾದ ಕೃಷ್ಣಪ್ಪಗೌಡ, ಕಪಿಲೇಶ್, ಚೆಲುವರಾಜು, ನಿಧಿ ಸುರೇಶ್, ಜಿ.ಬಸವರಾಜು, ಮುಧುರಾಜ್, ಮೋದಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಂಠ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಸೇರಿದಂತೆ ಹಲವಾರು ಪ್ರಮುಖರು ಇದ್ದರು.

Translate »