ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧದ ಬೆನ್ನ ಹಿಂದೆಯೇ ರಾಜಮಾರ್ಗದಲ್ಲಿ ಹೇಸಿಗೆ ಮೆರೆದವರು!
ಮೈಸೂರು

ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧದ ಬೆನ್ನ ಹಿಂದೆಯೇ ರಾಜಮಾರ್ಗದಲ್ಲಿ ಹೇಸಿಗೆ ಮೆರೆದವರು!

April 6, 2021

ಮೈಸೂರು,ಏ.5-ಮೈಸೂರಿನ ರಾಜಮಾರ್ಗ ಸಯ್ಯಾಜಿ ರಾವ್ ರಸ್ತೆಯಲ್ಲಿ ಸೋಮವಾರ ಕಂಡು ಬಂದ ಪ್ಲಾಸ್ಟಿಕ್ ರಾಶಿ, ಜಿಲ್ಲಾಡಳಿತದ ಆದೇಶವನ್ನು ಅಣಕ ಮಾಡುವಂತಿತ್ತು.

ಸ್ವಚ್ಛತೆ, ಪರಿಸರ ಸಂರಕ್ಷಣೆಯ ಸದುದ್ದೇಶದಿಂದ ಜಿಲ್ಲೆಯಾ ದ್ಯಂತ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ, ಜಿಲ್ಲಾಡಳಿತ ಆದೇಶಿಸಿದೆ. ಮಹತ್ವದ ಈ ನಿಯಮ ಜಾರಿಯಾಗಿರುವ ದಿನವೇ ಮೈಸೂರು ನಗರದ ಪ್ರಮುಖ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ರಾಶಿ ಕಾಣಿಸಿದ್ದು ಮಾತ್ರ ವಿಪರ್ಯಾಸ.

ಇಲ್ಲಿನ ಬೀದಿಬದಿ ವ್ಯಾಪಾರಿಗಳು, ಮಳಿಗೆದಾರರು ಕವರ್ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ರಸ್ತೆ ಬದಿಗೆ ಸುರಿದಿ ದ್ದಾರೆ. ಪ್ಲಾಸ್ಟಿಕ್ ನಿಷೇಧ ಇರುವುದರಿಂದ ಅಧಿಕಾರಿಗಳು ದಾಳಿ ನಡೆಸಿ, ದಂಡ ಹಾಕಬಹುದು ಎಂದು ಹೀಗೆ ಮಾಡಿರ ಬಹುದು. ಅದೇನೇ ಇರಲಿ ಹೀಗೆ ಬೇಜವಾಬ್ದಾರಿಯಿಂದ ರಸ್ತೆ ಬದಿ ಪ್ಲಾಸ್ಟಿಕ್ ರಾಶಿ ಹಾಕುವುದು ಸರಿಯಲ್ಲ. ಬಿಡಾಡಿ ಪ್ರಾಣಿಗಳು, ಬೀದಿನಾಯಿಗಳು ಈ ಪ್ಲಾಸ್ಟಿಕ್ ರಾಶಿಯನ್ನು ಚೆಲ್ಲಾಪಿಲ್ಲಿ ಗೊಳಿಸಬಹುದು. ಇಲ್ಲವೇ ಜೋರಾಗಿ ಗಾಳಿ ಬೀಸಿದರೆ ಪ್ಲಾಸ್ಟಿಕ್ ಕವರ್‍ಗಳು ಹಾರಿ ಎಲ್ಲಾದರೂ ಬೀಳಬಹುದು. ಹೀಗಾದರೆ ಪ್ಲಾಸ್ಟಿಕ್ ಮಹಾಮಾರಿಯನ್ನು ತಡೆಗಟ್ಟಲು ಹೇಗೆ ಸಾಧ್ಯ.

ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳು ಮಾತ್ರವಲ್ಲ, ನಗರದ ಅನೇಕ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ರಾಶಿ ಇತ್ತಾದರೂ ಪ್ರಮಾಣ ಕಡಿಮೆಯಿತ್ತು. ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟಿಬದ್ಧವಾಗಿರುವ ಜಿಲ್ಲಾಡಳಿತ, ಹೀಗೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರಿಗೆ ಎಚ್ಚರಿಕೆ ನೀಡಬೇಕು. ಬಟ್ಟೆ, ಬ್ಯಾಗ್ ಇನ್ನಿತರ ಮಾರಾಟದ ವಸ್ತುಗಳ ಪ್ಯಾಕಿಂಗ್ ಕವರ್‍ಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾತ್ರೋರಾತ್ರಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪ್ರತ್ಯಕ್ಷವಾಗುತ್ತದೆ ಎಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯಿಸಿದ್ದಾರೆ.

Translate »