ಕುಸಿದ ಮ್ಯಾನ್‍ಹೋಲ್‍ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ
ಮೈಸೂರು

ಕುಸಿದ ಮ್ಯಾನ್‍ಹೋಲ್‍ಗೆ ಪೊಲೀಸ್ ಬ್ಯಾರಿಕೇಡ್ ರಕ್ಷಣೆ

July 10, 2018

ಮೈಸೂರು: ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಚಿದಂಬರೇಶ್ವರ ದೇವಾಲಯದ ಸಮೀಪ ಮ್ಯಾನ್‍ಹೋಲ್ ಕುಸಿದಿದ್ದು, ಜೀವಬಲಿಗೆ ಕಾದಿರುವಂತಿದೆ.

ಈ ರಸ್ತೆಯಲ್ಲಿ ಸದಾವಾಹನ ದಟ್ಟಣೆ ಇರುತ್ತದೆ. ಅಲ್ಲದೆ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ವಾಹನಗಳ ಚಕ್ರ ಮ್ಯಾನ್‍ಹೋಲ್‍ಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಹೋಗುವವರೂ ಈ ಮಾರ್ಗವಾಗಿಯೇ ಸಾಗುತ್ತಾರೆ. ಕತ್ತಲಲ್ಲಿ ಪಾದಚಾರಿಗಳು ಮ್ಯಾನ್‍ಹೋಲ್‍ಗೆ ಕಾಲಿಟ್ಟರೆ ಜೀವಾಪಾಯವೂ ಉಂಟಾಗಬಹುದು.

ಮ್ಯಾನ್‍ಹೋಲ್ ಕುಸಿದು ಹಲವು ದಿನಗಳೇ ಕಳೆದಿದೆ. ಮ್ಯಾನ್‍ಹೋಲ್ಗೆ ಕಸವನ್ನು ತುಂಬಲಾಗಿದ್ದು, ಪರಿಣಾಮ ಒಳಚರಂಡಿ ನೀರು ಹರಿವಿಗೂ ಅಡ್ಡಿಯಾಗಿದೆ. ಮಳೆ ಬಂದಾಗ ಕೊಳಚೆ ನೀರು ರಸ್ತೆಯಲ್ಲಿ ಹರಿದು ರಾಡಿಯಾಗುತ್ತದೆ. ಈ ದುಸ್ಥಿತಿ ಯನ್ನು ಕಂಡ ಪೊಲೀಸರು ಬ್ಯಾರಿಕೇಡ್ ಇಟ್ಟು ಸಾರ್ವಜನಿಕರಿಗೆ ಅಪಾಯದ ಸೂಚನೆ ನೀಡಿದ್ದಾರೆ. ಆದರೆ ಮ್ಯಾನ್‍ಹೋಲ್ ಮುಚ್ಚಿರುವ ಕಸದ ರಾಶಿ ಕೊಳೆತು ದುರ್ವಾಸನೆ ಬೀರುವುದನ್ನು ಅವರಿಂದ ತಪ್ಪಿಸಲು ಸಾಧ್ಯವಾಗಿಲ್ಲ.ಇಷ್ಟಾದರೂ ನಗರ ಪಾಲಿಕೆ ಮಾತ್ರ ಮ್ಯಾನ್‍ಹೋಲ್ ದುರಸ್ತಿಗೆ
ಯಾವುದೇ ಕ್ರಮ ಕೈಗೊಂಡಿಲ್ಲ.

ರಸ್ತೆ ಹಳ್ಳ ಬೀಳುವುದು, ಮ್ಯಾನ್‍ಹೋಲ್ ಕುಸಿಯುವುದು ಮೈಸೂರಿನಲ್ಲಿ ಸಾಮಾನ್ಯ ಎಂಬಂತಾಗಿದೆ. ಹೀಗಾದಾಗ ಸಂಭವಿಸಬಹುದಾದ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ಎಚ್ಚರಿಕೆ ನೀಡುತ್ತಾರೆ. ಹೇಗಿದ್ದರೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ ಎಂದು ನಗರ ಪಾಲಿಕೆಯವರು ನಿರ್ಲಕ್ಷ್ಯ ವಹಿಸುತ್ತಾರೆ. ತಿಂಗಳಾದರೂ ದುರಸ್ತಿ ಮಾಡುವ ಗೋಜಿಗೆ ಹೋಗುವುದಿಲ್ಲ. ಅವರಿಗೆ ಮಾಡಬೇಕೆನಿಸಿದಾಗ ಕೆಲಸ ಆರಂಭಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿರುವ ನಾಗರಿಕರು, ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ಸಮಸ್ಯೆಗಳನ್ನು ಸರಿಪಡಿಸುವುದಕ್ಕೂ ವಿಳಂಬ ಮಾಡುವುದೇಕೆ?. ದಿನನಿತ್ಯ ನಿರ್ವಹಣೆಯ ಬಗ್ಗೆಯೇ ಹೀಗೆ ಅಸಡ್ಡೆ ತೋರಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಮಂದಗತಿ ಕಾಮಗಾರಿ: ಬೆಂಗಳೂರು- ನೀಲಗಿರಿ ರಸ್ತೆಯ ಲಿಡೋ ಚಿತ್ರಮಂದಿರದ ಬಳಿ ನಡೆಯುತ್ತಿರುವ ಮ್ಯಾನ್‍ಹೋಲ್ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆಯಲ್ಲಿ ದಿನವಿಡೀ ಭಾರೀ ವಾಹನ ಸಂಚಾರವಿರುತ್ತದೆ. ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೋಗುವ ಬಸ್ಸುಗಳೆಲ್ಲಾ ಇದೇ ಮಾರ್ಗವಾಗಿ ಸಾಗುತ್ತವೆ. ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಬಸ್ ನಿಲ್ದಾಣ, ಚಿತ್ರಮಂದಿರಗಳಿಗೆ ಬರುವ ಪಾದಚಾರಿಗಳಿಗೂ ತೊಂದರೆಯಾಗುತ್ತದೆ.

ಮ್ಯಾನ್‍ಹೋಲ್ ಕುಸಿದು ಸುಮಾರು 15 ದಿನಗಳೇ ಕಳೆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ `ಮೈಸೂರು ಮಿತ್ರ’ ಜೂ.26ರ ಸಂಚಿಕೆಯಲ್ಲಿ `ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ ಕುಸಿದಿರುವ ಮ್ಯಾನ್‍ಹೋಲ್’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಮರುದಿನದಿಂದಲೇ ದುರಸ್ತಿ ಕಾಮಗಾರಿ ಆರಂಭಿಸಿದ್ದರು. ಆದರೆ ಅದೂ ಮಂದಗತಿಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತ್ವರಿತಗೊಳಿಸಬೇಕಿದೆ.

Translate »