ಬೆಂಗಳೂರು: ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜಾತಿ, ಧರ್ಮ ಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಇವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಶಕ್ತಿಗಳನ್ನು ಪೊಲೀಸರು ಮಟ್ಟಹಾಕಿ ರಾಜ್ಯದ ಪ್ರತಿ ಪ್ರಜೆಗೂ ಕಾನೂನಿನಲ್ಲಿ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಪೊಲೀಸ್ ಹುತಾತ್ಮ ದಿನಾಚರಣೆ ಅಂಗ ವಾಗಿ ನಗರದ ಕೋರಮಂಗಲದ ಕೆಎಸ್ ಆರ್‌ಪಿ ಮೈದಾನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿ ಮಾತನಾಡಿದ ಅವರು, ಸ್ವಾರ್ಥ ಹಿತಾಸಕ್ತಿಗಾಗಿ ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯ ಬಾರದು. ಇದಕ್ಕೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡುತ್ತದೆ ಎಂದರು.
ನಿರ್ಭೀತಿಯಿಂದ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಅಭಯ ನೀಡಿದರು. ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ದೇವರು ಎಂಬ ಭಾವನೆ ಸಾಮಾನ್ಯ ಜನರಲ್ಲಿ ಮೂಡಬೇಕು ಆ ರೀತಿಯಲ್ಲಿ ನೀವು ಕೆಲಸ ಮಾಡಬೇಕು. ಪೊಲೀಸರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಾಡನ್ನು ಕಾಯುವ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ದೇಶದಲ್ಲೇ ರಾಜ್ಯ ಪೊಲೀಸ್ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆ ಯಲ್ಲಿ ಹೆಸರುವಾಸಿಯಾಗಿದೆ. ನಮ್ಮ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಾಡನ್ನು ರಕ್ಷಣೆ ಮಾಡುತ್ತಿರುವ ನಿಮಗೆ ರಾಜ್ಯದ ಪರವಾಗಿ ಗೌರವ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು. ಪೊಲೀ ಸರ ಸಮಸ್ಯೆ ನಿವಾರಣೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಈ ಕುರಿತು ಸರ್ಕಾರಕ್ಕೆ ನೀಡಿರುವ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಪರಮೇ ಶ್ವರ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್, ನಟ ಕಿಚ್ಚ ಸುದೀಪ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯದ ಹುತಾತ್ಮ ಪೊಲೀಸರ ಕುಟುಂಬಸ್ಥರು, ನಿವೃತ್ತ ಪೊಲೀಸ್ ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿದ್ದರು.