ಹಾಸನ: ಮಿಸ್ಟರ್ ಸುಳ್ಳೇಂದ್ರ ಮೋದಿ ಎಂದು ಉಚ್ಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜರಿದ ಬಹುಭಾಷಾ ನಟ ಪ್ರಕಾಶ್ ರೈ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವು ದಿಲ್ಲ ಎಂದು ಭವಿಷ್ಯ ನುಡಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂವಿಧಾನ ಉಳಿಸಿ ಸಂಕಲ್ಪ ಸಮಾವೇಶ’ ದಲ್ಲಿ ಎ.ಕೆ.ಸುಬ್ಬಯ್ಯ ಅವರ ‘ಸಂವಿಧಾನ ಅಪಾಯದಲ್ಲಿದೆ’ ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದರು. ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದವನಲ್ಲ. ರಾಜಕೀಯ ಮಾಡಬೇಕಾದರೆ ಪಕ್ಷವೇ ಬೇಕಾಗಿಲ್ಲ. ನನಗೆ ಪದವಿ ಮತ್ತು ಅಧಿಕಾರದ ಅವಶ್ಯಕತೆಯಿಲ್ಲ ಎಂದರು.
ಎಲ್ಲಾ ಪಕ್ಷವನ್ನು ಕಂಡಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರದ್ದೇ ಆದ ಸಿದ್ಧಾಂತವಿದೆ. ಆದರೆ ಬಿಜೆಪಿಗೆ ಸಿದ್ಧಾಂತಗಳಿಲ್ಲ ಎಂದು ಕಿಡಿಕಾರಿದ ಅವರು, ಬಿಜೆಪಿ ಆಡಳಿತದಿಂದ ಏನು ಅಭಿವೃದ್ಧಿ ಆಗಿಲ್ಲ ಎಂದು ದೂರಿದರು.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿ, ನರೇಂದ್ರ ಮೋದಿಗೆ ಪ್ರಧಾನಿ ಯಾಗಲು ಯಾವ ಅರ್ಹತೆಯೂ ಇಲ್ಲ. ಮೂರೂವರೆ ವರ್ಷದಲ್ಲಿ ಏನೂ ಸಾಧನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮತದಾರರು ಜೆಡಿಎಸ್‍ಗೆ ಓಟು ಹಾಕುವ ಮೊದಲೂ ಆ ಪಕ್ಷದ ವರಿಷ್ಠರು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾ ರೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾವ ಕಾರಣಕ್ಕೂ ಫ್ಯಾಸಿಸ್ಟ್ ಶಕ್ತಿಯೊಂದಿಗೆ ಜತೆಗೂಡುವುದಿಲ್ಲ ಎಂಬ ಭರವಸೆ ನೀಡಿದರಷ್ಟೇ ಅವರಿಗೆ ಮತ ಹಾಕಬೇಕು ಎಂದು ಜೆಡಿಎಸ್ ಮೇಲೂ ಕಿಡಿಕಾರಿದರು. ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಸಮನ್ವಯಕಾರ ಕೆ.ಎಲ್. ಅಶೋಕ್ ಮಾತನಾಡಿದರು.
ಸಮಾವೇಶದಲ್ಲಿ ಸಿರಿಮನೆ ನಾಗರಾಜ್, ಇರ್ಷಾದ್ ದೇಸಾಯಿ ಮಾತನಾಡಿದರು. ಸಾಹಿತಿ ರೂಪ ಹಾಸ, ಆರ್.ಪಿ.ವೆಂಕಟೇಶ ಮೂರ್ತಿ, ಫಾರುಕ್ ಪಾಷಾ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಪುಟ್ಟರಾಜು, ನಾರಾಯಣದಾಸ್, ಹೆತ್ತೂರು ನಾಗರಾಜ್, ಕೋಮು ಸೌಹಾರ್ದ ವೇದಿಕೆಯ ಜಯರಾಂ ನಾಯಕರಹಳ್ಳಿ, ಮುವ್ ಮೆಂಟ್ ಅಧ್ಯಕ್ಷ ಫಾರುಖ್ ಪಾಷ, ಶಂಕರ್‍ರಾಜ್, ಅಮಿರ್ ಜಾನ್, ಮಹಬೂಬ್ ಅಲಿಖಾನ್ ಇತರರಿದ್ದರು.