ಸಿಎಂ ಹೆಚ್‍ಡಿಕೆ ಭೇಟಿ ಮಾಡಿದ ಪ್ರತಾಪ್‍ಸಿಂಹ
ಮಂಡ್ಯ

ಸಿಎಂ ಹೆಚ್‍ಡಿಕೆ ಭೇಟಿ ಮಾಡಿದ ಪ್ರತಾಪ್‍ಸಿಂಹ

September 27, 2018

ಮಂಡ್ಯ:  ನಗರದ ಪ್ರವಾಸಿ ಮಂದಿರಕ್ಕೆ ಬುಧವಾರ ದಿಢೀರ್ ಭೇಟಿ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಿದಾಗ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆಗೆ ಅನುಮತಿ ನೀಡಿದ್ದರು. ಆದರೆ, ಇದಕ್ಕಾಗಿ ಕೆಲ ಮರಗಳನ್ನು ತೆರವುಗೊಳಿಸಬೇಕು ಎಂಬುದರ ಬಗ್ಗೆ ವರದಿ ಆಗಿತ್ತು. ಈ ಸಂಬಂಧ ಮರಗಳ ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇದು 7,000 ಕೋಟಿಯ ಯೋಜನೆಯಾಗಿದೆ ಎಂದು ತಿಳಿಸಿದರು.

ಯೋಜನೆ ಪ್ರಾರಂಭಕ್ಕೆ ಮರಗಳ ವಿಚಾರದಲ್ಲಿ ವಿಳಂಬವಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅಲ್ಲದೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೂ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೆ ಕಾಮಗಾರಿ ಆರಂಭವಾಗಲಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ರಾಜಕೀಯ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ಬೇರೆ ಸಂದರ್ಭದಲ್ಲಿ ರಾಜಕೀಯದ ಅಗತ್ಯ ನನಗಿಲ್ಲ ಎಂದು ತಿಳಿಸಿದರು.

Translate »