ಸುರಕ್ಷತಾ ಸಾಧನವಿಲ್ಲದೆ ಒಳಚರಂಡಿ ದುರಸ್ತಿ
ಮಂಡ್ಯ

ಸುರಕ್ಷತಾ ಸಾಧನವಿಲ್ಲದೆ ಒಳಚರಂಡಿ ದುರಸ್ತಿ

September 27, 2018

ಮದ್ದೂರಿನ 10ನೇ ವಾರ್ಡ್‍ನಲ್ಲಿ ಘಟನೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮದ್ದೂರು: ಪೌರ ಕಾರ್ಮಿಕ ರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಒಳಚರಂಡಿಯನ್ನು ದುರಸ್ತಿ ಮಾಡಿಸಲಾಗಿದೆ ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಮುಖಂಡ ಶ್ರೀನಿವಾಸ್ ಆರೋಪಿಸಿದ್ದಾರೆ.

ಪಟ್ಟಣದ 10ನೇ ವಾರ್ಡ್‍ನ ಚನ್ನೇ ಗೌಡ ಬಡಾವಣೆಯಲ್ಲಿ ಹಲವು ದಿನಗಳಿಂದ ಹದಗೆಟ್ಟಿದ್ದ ಒಳಚರಂಡಿಯನ್ನು ಕಾರ್ಮಿಕ ರಿಂದ ಬರೀ ಕೈಯಲ್ಲಿಯೇ ಸ್ವಚ್ಛಗೊಳಿಸಿ ರಿಪೇರಿ ಮಾಡಿಸಲಾಗಿದೆ. ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೌರಕಾರ್ಮಿಕರ ಭದ್ರತೆ ಮತ್ತು ಆರೋಗ್ಯ ದೃಷ್ಟಿಯಿಂದ ಎಸ್‍ಸಿ, ಎಸ್‍ಟಿ ಯೋಜನೆ ಮತ್ತು ನಗರ ಅಭಿವೃದ್ಧಿ ಯೋಜನೆಯಡಿ ಹಲವು ಸೌಲಭ್ಯ ಮತ್ತು ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಸ್ವಚ್ಛತೆಗಾಗಿ ಗುತ್ತಿಗೆದಾರರು ಮತ್ತು ಪುರಸಭೆ ಅಧಿಕಾರಿಗಳು ವರ್ಷಕ್ಕೆ ಸಾಕಷ್ಟು ಅನುದಾನ ಖರ್ಚು ಮಾಡುತ್ತಿ ರುವ ಬಗ್ಗೆ ಪುಸ್ತಕದಲ್ಲಿ ಲೆಕ್ಕ ತೋರಿಸಿ ಹಣ ಲೂಟಿ ಮಾಡುತ್ತಿದ್ದಾರೆ. ಆದರೆ, ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಕೆಲಸ ಮಾಡುವಾಗ ಸುರಕ್ಷತಾ ಸಾಧನ ಗಳನ್ನು ವಿತರಿಸುವ ಬಗ್ಗೆ ಯೋಚಿಸುತ್ತಿಲ್ಲ. ಬದಲಿಗೆ ಅಧಿಕಾರಿಗಳು ಮೃಗಗಳಾಗಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

10ನೇ ವಾರ್ಡ್‍ನಲ್ಲಿ ನಡೆದಿರುವ ಘಟನೆ ಬಗ್ಗೆ ತಿಳಿದು ಬಂದಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಮುಂದೆ ಈ ರೀತಿ ಘಟನೆ ಸಂಭವಿಸದಂತೆ ಎಚ್ಚರವಹಿಸುತ್ತೇನೆ.
-ಮಹೇಶ್,ಮುಖ್ಯಾಧಿಕಾರಿ, ಮದ್ದೂರು ಪುರಸಭೆ

Translate »