ಬೇಲೂರಲ್ಲಿ ತ್ರಿವಿಧ ದಾಸೋಹಿಗೆ ಅಂತಿಮ ನಮನ
ಹಾಸನ

ಬೇಲೂರಲ್ಲಿ ತ್ರಿವಿಧ ದಾಸೋಹಿಗೆ ಅಂತಿಮ ನಮನ

January 22, 2019

ಬೇಲೂರು: ಕಾಯಕಯೋಗಿ, ನಡೆದಾ ಡುವ ದೇವರು, ತ್ರಿವಿಧ ದಾಸೋಹಿ ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಗಳು ವಿಧಿವಶರಾದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಮಹಿಳಾ ಕದಳಿ ವೇದಿಕೆ ವತಿಯಿಂದ ಪಟ್ಟಣದ ಶ್ರೀ ವೀರಶೈವ ಸಮುದಾಯಭವನದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, 12 ನೇ ಶತಮಾನದಲ್ಲಿ ವಿಶ್ವ ಗುರುಬಸವಣ್ಣನವರ ನಿಜರೂಪವೇ ಎಂದು ಭಾವಿಸಿದ ನಾವುಗಳು ಅವರನ್ನು ಅಧುನಿಕ ಅಥವಾ ಕಲಿಯುಗ ಬಸವಣ್ಣ ಎಂದು ಕರೆಯುತ್ತಿದ್ದೆವು. ಜಾತಿ ಧರ್ಮ ವರ್ಗ ಭೇದವಿಲ್ಲದೆ ಅವರು ಸಾವಿರಾರು ಮಕ್ಕಳಿಗೆ ಊಟ ವಸತಿ ಶಿಕ್ಷಣ ನೀಡಿ ತ್ರಿವಿಧ ದಾಸೋಹಿಯಾಗಿದ್ದಾರೆ, ಇಂತಹ ಮಹಾನ್ ಚೇತನ ನಮ್ಮನ್ನು ಅಗಲಿದ್ದು ನಿಜಕ್ಕೂ ನೋವು ತಂದಿದೆ. ಪೂಜ್ಯರು 111 ವರ್ಷದ ಅವಿರತ ಹೋರಾಟದ ಬದುಕು ನಮಗೆ ದಾರಿ ದೀಪವಾಗಬೇಕು, ಅವರ ಆದರ್ಶಗಳನ್ನು ನಾವು ಗಳು ಅಳವಡಿಸಿಕೊಳ್ಳುವ ಮೂಲಕ ಪೂಜ್ಯರ ಆತ್ಮಕ್ಕೆ ಶಾಂತಿ ತರಬೇಕು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎಂ.ನಿಂಗರಾಜು ಮಾತನಾಡಿ, ಪ್ರತಿ ವರ್ಷ ಸಿದ್ಧ ಗಂಗೆಯಲ್ಲಿ ಸುಮಾರು 12 ಸಾವಿರ ಮಕ್ಕಳಿಗೆ ವಸತಿ ದಾಸೋಹ ನೀಡಿ, ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆ ಮಾಡಲು ಪೂಜ್ಯರು ಪಟ್ಟ ಕಷ್ಟ ನಿಜಕ್ಕೂ ಮಾದರಿಯಾಗಿದೆ. ಸಂಬಂಧ ಪಟ್ಟ ಸರ್ಕಾರಗಳು ಇಂತಹ ಚೇತನಕ್ಕೆ ಭಾರತ ರತ್ನ ನೀಡಲು ಮೀನಾ-ಮೇಷ ಎಣಿಸಿದ್ದು ನಿಜಕ್ಕೂ ಶೋಚನೀಯವಾಗಿದೆ, ಅವರು ವಿಶ್ವದ ರತ್ನವಾಗಿದ್ದಾರೆ, ಬೇಲೂರಿನಲ್ಲಿ ಶಿವಕುಮಾರಸ್ವಾಮಿ ಟ್ರಸ್ಟ್ ಹತ್ತಾರು ವರ್ಷಗಳಿಂದ ಅಖಿಲ ಭಾರತ ವೀರಶೈವ ಮಹಾಸಭಾದ ಜೊತೆ ಯಲ್ಲಿ ಸಿದ್ಧಗಂಗಾ ಪೂಜ್ಯರ ಜನ್ಮ ದಿನಾಚರಣೆಯಲ್ಲಿ ತಾಲೂಕಿನಲ್ಲಿ ಅರ್ಥಪೂರ್ಣವಾಗಿ ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.

ವೀರಶೈವ ಸಂಘದ ಅಧ್ಯಕ್ಷ ಬಿ.ಎಸ್.ರಾಜಶೇಖರ್ ಮಾತನಾಡಿ, ಸಿದ್ಧಗಂಗೆಯಲ್ಲಿ ವ್ಯಾಸಂಗ ಮಾಡಿದ ಬಹುತೇಕರು ಉನ್ನತ ಹುದ್ದೆಯಲ್ಲಿ ಇಂದು ಕೆಲಸ ಮಾಡುತ್ತಿದ್ದಾರೆ. ದೇಶ-ವಿದೇಶಗಳಿಂದ ಅವರಿಗೆ ಭಕ್ತ ಸಮೂಹವಿದೆ, ರಾಜ್ಯದ 6 ಕೋಟಿ ಜನರು ಕೂಡ ಜಾತಿ ಭೇದವಿಲ್ಲದೆ ಪ್ರೀತಿಸುವ ಹಾಗೂ ಭಕ್ತಿ ನೀಡುವ ಏಕೈಕ ಪೂಜ್ಯರು ಅವರೇ ನಮ್ಮ ಶಿವಕುಮಾರಸ್ವಾಮೀಜಿಗಳು ಎಂದ ಅವರು ಪೂಜ್ಯರ ನೆನಪಿಗಾಗಿ ಬೇಲೂರಿನಲ್ಲಿ ಮುಂದಿನ ದಿನದಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ಸದ್ಯದಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವೀರಶೈವ ಮುಖಂಡರಾದ ಬಿ.ಕೆ.ಚಂದ್ರಕಲಾ, ತಾಲೂಕು ಬಿಜೆಪಿ ಅಧ್ಯಕ್ಷ ಕೊರ ಟಿಕೆರೆ ಪ್ರಕಾಶ್, ಮುಖಂಡರಾದ ಅದ್ದೂರಿ ಚಂದ್ರ ಶೇಖರ್, ಬಿ.ಎಂ.ದೊಡ್ಡವೀರೇಗೌಡ, ಕ್ರೌರಿ ರಾಜ ಶೇಖರ್, ಕ್ರೌರಿ ವಿಕ್ರಂ, ಮಹದೇವ್, ಯೋಗೀಶ್, ಬಲ್ಲೇನಹಳ್ಳಿ ರವಿಕುಮಾರ್, ಹಗರೆ ದಿಲೀಪ್, ವಿರೂ ಪಾಕ್ಷ, ಹೇಮಾ, ವಿಜಯಲಕ್ಷ್ಮಿ, ಅನ್ನಪೂರ್ಣ, ಉಮಾ ಶಂಕರ್ ಇನ್ನು ಮುಂತಾದವರು ಹಾಜರಿದ್ದರು.
ಹೊಯ್ಸಳ ಶಾಲೆ: ನಡೆದಾಡುವ ದೇವರು ಶ್ರೀ ಶಿವ ಕುಮಾರಸ್ವಾಮೀಜಿಯವರ ನಿಧನಕ್ಕೆ ಹಳೇಬೀಡಿನ ಹೊಯ್ಸಳ ಪ್ರೌಢಶಾಲೆಯಲ್ಲಿ ಶ್ರದ್ಧಾಂಜಲಿ ಅರ್ಪಿ ಸುವುದರ ಮೂಲಕ ಗೌರವ ಸಲ್ಲಿಸಲಾಯಿತು.

ಶ್ರೀ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದ ನಂತರ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಎನ್.ಡಿ.ದಾಸಪ್ಪ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ತಮ್ಮದೆ ಛಾಪು ಮೂಡಿಸಿದ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಯವರಾಗಿದ್ದಾರೆ. ಶ್ರೀಯವರ ಮಠದಿಂದ ಇಂದು ಲಕ್ಷಾಂತರ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದು ದೇಶ ವಿದೇಶಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಜಾತಿ, ಧರ್ಮ, ರಾಜಕೀಯದ ಸೋಂಕಿಲ್ಲದೆ ಸದಾ ಸಮಾಜ ಚಿಂತಕರಾಗಿ ತಮ್ಮ 111 ವಸಂತದ ಇಳಿವಯಸ್ಸಿನಲ್ಲೂ ಸಾರ್ಥಕ ಬದುಕನ್ನ ಸಾರ್ಥಕವಾಗಿಯೇ ಪೂರೈಸಿದ ಮೇಧಾವಿಯಾಗಿದ್ದಾರೆಂದು ಹೇಳಿದರು.

2 ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಿಕ್ಷಕರಾದ ಹೆಚ್.ಎಸ್.ರಮೇಶ್, ಕಾಳೇಗೌಡ, ಎಸ್.ರಮೇಶ್, ಎಂ.ವೈ.ರಾಜು, ಹಿರಿಯಣ್ಣಗೌಡ, ಗಂಗೇಗೌಡ ಇದ್ದರು.

ಲಕ್ಷಾಂತರ ಜನರ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಿದ್ದ ಶ್ರೀಗಳು
ತುಮಕೂರಿನ ಸಿದ್ಧಗಂಗಾ ಮಠದ ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ವಿಷಯ ತಿಳಿದು ತುಂಬಾ ದುಃಖವಾಯಿತು. ಅವರು ಕನ್ನಡ ನಾಡಿನ ಪುಣ್ಯ ನಿಧಿ. ಸಿದ್ಧಗಂಗೆಯನ್ನು ಜ್ಞಾನಗಂಗೆಯನ್ನಾಗಿ ಮಾಡಿದವರು.
ನಾಡಿನ ಹಿರಿಯಜ್ಜ, ದೇಶ ಕಂಡ ಅಪರೂಪದ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರೆಂದೇ ಪ್ರಖ್ಯಾತಿ ಪಡೆದ ಪೂಜ್ಯ ಶ್ರೀಗಳವರು ‘ಭಾರತ ಗೌರವ’ದಂತೆ ಇದ್ದರು. ಮಠದಲ್ಲಿದ್ದರೂ ಹಿಮಾಲಯದಂತೆ ತಪಸ್ವಿಗಳು, ವಯಸ್ಸಾಗಿದ್ದರೂ ಕೂಡ ಯುವಕರಾಗಿದ್ದರು. ಇವರು ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ. ಲಕ್ಷಾಂತರ ಜನರ ವಿದ್ಯಾಭ್ಯಾಸಕ್ಕೆ ದಾರಿದೀಪ ವಾಗಿದ್ದರು. ಇವರು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಸಾಧಿಸಿ ಕ್ರಾಂತಿಕಾರಿ ಕಾರ್ಯಗಳನ್ನು ಮಾಡಿರುತ್ತಾರೆ. ಸರ್ವಧರ್ಮದವರಲ್ಲಿ ಸಮಾನತೆಯನ್ನು ಸಾಧಿಸಿ, ಪೂಜ್ಯರಾಗಿದ್ದರು. ಜಾತಿ, ಮತ, ಭೇದವಿಲ್ಲದೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯ ಮೂಲಕ ಜ್ಞಾನದಾತಾ ಸರಸ್ವತಿಯಾಗಿದ್ದರು.

ಪೂಜ್ಯ ಶ್ರೀಗಳವರು ತಮ್ಮ ಆದರ್ಶ ಮತ್ತು ಸರಳ ಜೀವನದ ಮೂಲಕ ಸಂತ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಪೂಜ್ಯ ಶ್ರೀಗಳವರ ನಿಧನದಿಂದ ನಮಗೆ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ, ಮೋಕ್ಷ ಪ್ರಾಪ್ತಿಯಾಗಲೆಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ. ಕಿರಿಯ ಸ್ವಾಮಿಗಳು ಅವರ ಆದರ್ಶವನ್ನು ಮುಂದುವರಿಸಿ, ಗುರು ತೋರಿದ ಮಾರ್ಗದಲ್ಲಿ ಯಶಸ್ವಿಯಾಗಲಿ.
– ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳ

Translate »