ರಾಮನಾಥಪುರ: ಇಂದು ಲಿಂಗೈಕ್ಯರಾದ ತ್ರೀವಿಧ ದಾಸೋಹಿ, ಕಲಿಯುಗ ಬಸವಣ್ಣ, ನಡೆದಾಡುವ ದೇವರೇ ಎಂದು ನಮ್ಮ ನಾಡಿನ ಜನರೇ ಕರೆಯುತ್ತಿರುವ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಈ ದೇಶದ ಹೆಮ್ಮೆಯವ ರಾಗಿದ್ದು, ಅವರಿಗೆ ಭಾರತ ರತ್ನ ನೀಡಬೇಕು ಎಂದು ಶರಣ ಸಾಹಿತ್ಯ ಪರಿಷತ್ತು ದತ್ತಿ ದಾನಿ ಸೋಮಶೇಖರ್ ಮನವಿ ಮಾಡಿದರು.
ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಆಟೋ ಮಾಲೀಕರ ಸಂಘ, ವೀರಶೈವ ಸಮಾಜ ಬಾಂಧವರು ಹಾಗೂ ವಿವಿಧ ಸಂಘಗಳು ಸೇರಿ ಇಂದು ಶಿವಕ್ಯರಾದ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಯವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ನಂತರ ಮಾತ ನಾಡಿದ ಅವರು, ಸಿದ್ಧಗಂಗಾ ಶ್ರೀಗಳು 111 ನೇ ವಯಸ್ಸಿನ ಲ್ಲಿಯೂ ಸಕ್ರಿಯವಾಗಿ ದುಡಿಯುತ್ತಾ ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದರು. ಹತ್ತಾರು ಸಾವಿರ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನೋಪಾಯಕ್ಕೆ ಆಶ್ರಯ ನೀಡಿ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅವಿಸ್ಮರಣೀಯವಾದುದು. ಅವರು ಮಾಡುತ್ತಿರುವ ವಿವಿಧ ಸಾಧನೆಗೆ ಗೌರವ ಕಾಪಾಡಲು ಕಲಿಯುಗ ಬಸವಣ್ಣ ಎಂದೇ ಕರೆಯುವ ಶ್ರೀಗಳವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಟೋ ಮಾಲೀಕರ ಸಂಘದ ಅಧ್ಯಕ್ಷ ಆಟೋ ರಾಜಣ್ಣ, ಸದಸ್ಯರಾದ ವೇಣು, ಭೋಜರಾಜ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಮಾರಸ್ವಾಮಿ, ಸದಸ್ಯರಾದ ಕೋಟವಾಳು ಕೆ.ಎನ್. ಪಂಚಾಕ್ಷರಿ, ಸ್ವಾಮಿ, ಶಿವರಾಜ್, ಡೈವರ್ ಬಾಬು ಮುಂತಾದವರಿದ್ದರು.