ಮೇಲುಕೋಟೆಯಲ್ಲಿ ಸ್ವಚ್ಛತೆಗೆ ಆದ್ಯತೆ
ಮಂಡ್ಯ

ಮೇಲುಕೋಟೆಯಲ್ಲಿ ಸ್ವಚ್ಛತೆಗೆ ಆದ್ಯತೆ

August 2, 2018

ಮೇಲುಕೋಟೆ: ಆಗಸ್ಟ್ ತಿಂಗಳ ಪೂರ್ತಿ ಮೇಲುಕೋಟೆಯಲ್ಲಿ ಸ್ವಚ್ಛ ಸರ್ವೇ ಕ್ಷಣಾ ಕಾರ್ಯಕ್ರಮ ನಡೆಯಲಿದ್ದು, ಇಡೀ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ನಾರಾಯಣಭಟ್ ತಿಳಿಸಿದರು.

ಇಲ್ಲಿನ ಗ್ರಾಪಂ ಸಭಾಂಗಣದಲ್ಲಿ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಬಯಲು ಬಹಿರ್ದೆಸೆ ಬದಲು ಪ್ರತಿ ಮನೆಗಳಲ್ಲಿ ಶೌಚಾಲಯ ಬಳಕೆ ಮಾಡುವಂತೆ ಮತ್ತು ಕುಡಿಯಲು ಶುದ್ಧ ಕುಡಿಯುವ ನೀರು ಬಳಸಲು ಜಾಗೃತಿ ಮೂಡಿಸಲಾಗುತ್ತದೆ. ಮೇಲುಕೋಟೆ ವ್ಯಾಪ್ತಿಯಲ್ಲಿ ಬರುವ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳ ಪರಿಸರ ಸ್ವಚ್ಛತೆಗೆ ಗ್ರಾಪಂ ಆದ್ಯತೆ ನೀಡಲಿದ್ದು, ದೇವಾಲಯದ ಸಹಕಾರದಲ್ಲಿ ಸ್ಮಾರಕಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಬೆಂಗಳೂರಿ ನಿಂದ ಪಟ್ಟಣದ ಸ್ವಚ್ಛತಾ ಪರಿಶೀಲನೆಗೆ ತಂಡ ಆಗಮಿಸಲಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ ಮಾತನಾಡಿ, ಮೇಲುಕೋಟೆ ವ್ಯಾಪ್ತಿಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದ್ದು ನಾಗರಿಕರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಮಳೆಯ ನೀರು ನಿಂತು ಲಾರ್ವ ಸೃಷ್ಟಿಯಾಗದಂತೆ ಪ್ರತಿ ಮನೆಯಲ್ಲೂ ಎಚ್ಚರ ವಹಿಸಬೇಕು. ಸೇವಿಸುವ ತರಕಾರಿಗಳು ಮತ್ತು ಆಹಾರ ಪದಾರ್ಥಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲೆಗಳ ಬಿಸಿಯೂಟ ತಯಾರಿಕೆಯಲ್ಲಿ ಸಹ ಅಡುಗೆಯವರು ಮತ್ತು ಶಿಕ್ಷಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಪಿಡಿಓ ತಮ್ಮಣ್ಣಗೌಡ ಮಾತನಾಡಿ, ಭಾರತ ಸರ್ಕಾರದ ಆದೇಶದಂತೆ ಇಡೀ ತಿಂಗಳು ಸ್ವಚ್ಛತಾ ಸರ್ವೇಕ್ಷಣಾ ಕಾರ್ಯ ಕ್ರಮ ನಡೆಯಲಿದೆ. ಪ್ಲಾಸ್ಟಿಕ್ ನಿಷೇಧ, ಶುದ್ಧ ಕುಡಿಯುವ ನೀರಿನ ಬಳಕೆ, ಕಸ ವಿಲೇವಾರಿ, ಶಾಲಾ ಆವರಣ ಮತ್ತು ಸ್ಮಾರಕ ಗಳು, ದೇವಾಲಯಗಳ ಆವರಣ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಅವ್ವ ಗಂಗಾಧರ್, ಬಲರಾಮೇಗೌಡ, ಸಾಕಮ್ಮ, ಯದುಶೈಲಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಹೇಶ್, ಶಾಲಾ ಮುಖ್ಯಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.

Translate »