ಸರ್ಕಾರ ರಚಿಸಲು ಮೋದಿಗೆ ರಾಷ್ಟ್ರಪತಿ ಆಹ್ವಾನ
ಮೈಸೂರು

ಸರ್ಕಾರ ರಚಿಸಲು ಮೋದಿಗೆ ರಾಷ್ಟ್ರಪತಿ ಆಹ್ವಾನ

May 26, 2019

ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚಿಸಲು ಎನ್‍ಡಿಎ ಮೈತ್ರಿ ಕೂಟದ ಸಂಸದೀಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾತ್ರಿ ಆಹ್ವಾನ ನೀಡಿದರು.

ಎನ್‍ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದ ನಂತರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಅದಕ್ಕೆ ಸಮ್ಮತಿಸಿದ ರಾಷ್ಟ್ರಪತಿ, ಸರ್ಕಾರ ರಚನೆಗೆ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ರಾಷ್ಟ್ರ ಪತಿ ಭವನ ಟ್ವೀಟ್ ಮಾಡಿದೆ.

ಇದೇ ವೇಳೆ ರಾಷ್ಟ್ರಪತಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮೋದಿ, ದೇಶದ ಜನರು ಮತ್ತೊಮ್ಮೆ ಸರ್ಕಾರ ರಚಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ರಾಷ್ಟ್ರಪತಿಗಳ ಬಳಿ ಹಕ್ಕು ಮಂಡಿಸಿದ್ದೆವು. ಅದಕ್ಕೆ ಅವರು ಸಮ್ಮತಿಸಿ ಸರ್ಕಾರ ರಚಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಜೊತೆಗೆ ಪ್ರಮಾಣ ವಚನ ದಿನಾಂಕ ಹಾಗೂ ಸಚಿವರ ಪಟ್ಟಿ ನೀಡುವಂತೆಯೂ ಸೂಚಿಸಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಮೋದಿ ಸಂಸದೀಯ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಎನ್‍ಡಿಎ ಮೈತ್ರಿ ಕೂಟದ ನಿಯೋಗ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು. ಈ ನಿಯೋಗ ದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ಹಿರಿಯ ಮುಖಂಡರಾದ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅಕಾಲಿ ದಳ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಎಲ್‍ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್, ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ, ತಮಿಳುನಾಡು ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಸೇರಿದಂತೆ ಪ್ರಮುಖ ಎನ್‍ಡಿಎ ಮುಖ್ಯಸ್ಥರಿದ್ದರು.

ಈ ನಿಯೋಗವು ಮೋದಿ ಅವರನ್ನು ಸಂಸದೀಯ ನಾಯಕರಾಗಿ ಸರ್ವಾನುಮತ ದಿಂದ ಆಯ್ಕೆ ಮಾಡಿರುವ ಬಗ್ಗೆ ಪತ್ರವನ್ನು ರಾಷ್ಟ್ರಪತಿಗಳಿಗೆ ನೀಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿತು. ಬಲ್ಲ ಮೂಲಗಳ ಪ್ರಕಾರ ಈ ಮಾಸಾಂತ್ಯಕ್ಕೆ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಮೇ 30ರಂದು ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಎನ್‍ಡಿಎ ಮೈತ್ರಿ ಕೂಟದ ಸಂಸದರ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‍ಡಿಎ ಸಂಸದೀಯ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎನ್‍ಡಿಎ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರು ಸಂಸದೀಯ ನಾಯಕ ಸ್ಥಾನಕ್ಕೆ ನರೇಂದ್ರ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದರು. ಬಿಜೆಪಿ ಮುಖಂಡರಾದ ರಾಜಾನಾಥ ಸಿಂಗ್, ನಿತಿನ್ ಗಡ್ಕರಿ, ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ, ಎನ್‍ಡಿಎ ಮೈತ್ರಿ ಕೂಟದ ಸದಸ್ಯರಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ನಾಗಾಲ್ಯಾಂಡ್ ಮುಖ್ಯಮಂತ್ರಿ ಕೋನಾರ್ಡ್ ಸಂಗ್ಮಾ, ತಮಿಳುನಾಡು ಮುಖ್ಯಮಂತ್ರಿ ಪಳನಿ ಸ್ವಾಮಿ, ಎಲ್‍ಜೆಪಿ ಮುಖ್ಯಸ್ಥ ರಾಮ್‍ವಿಲಾಸ್ ಪಾಸ್ವಾನ್ ಅನುಮೋದಿಸಿದರು. ಈ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅದ್ವಾನಿ, ಮುರಳಿ ಮನೋಹರ್ ಜೋಷಿ ಹಾಗೂ ಎನ್‍ಡಿಎ ಮೈತ್ರಿ ಕೂಟದ 353 ಸಂಸದರು ಉಪಸ್ಥಿತರಿದ್ದರು.

Translate »