ಅಹಂಕಾರವನ್ನು ಎಷ್ಟು ದೂರ ತಳ್ಳುತ್ತೇವೆಯೋ ಅಷ್ಟು ನಮಗೇ ಒಳ್ಳೆಯದು..
ಮೈಸೂರು

ಅಹಂಕಾರವನ್ನು ಎಷ್ಟು ದೂರ ತಳ್ಳುತ್ತೇವೆಯೋ ಅಷ್ಟು ನಮಗೇ ಒಳ್ಳೆಯದು..

May 26, 2019

ನವದೆಹಲಿ: ನಮಗೆ ಯಾವತ್ತೂ ಅಹಂಕಾರ ಬರಬಾರದು. ಅಹಂಕಾರ ವನ್ನು ಎಷ್ಟು ದೂರ ತಳ್ಳುತ್ತೇವೆಯೋ ಅಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸದರಿಗೆ ಪಾಠ ಮಾಡಿದರು.

ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಎನ್‍ಡಿಎ ಮೈತ್ರಿ ಕೂಟದ ಸಭೆಯಲ್ಲಿ ಸಂಸದೀಯ ನಾಯಕನಾಗಿ ಆಯ್ಕೆಯಾದ ನಂತರ ನೂತನ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಂದಾಗಿ ನಾವು ಇಲ್ಲಿ ಇದ್ದೇವೆ. ನಾವು ಎಷ್ಟೇ ಬೆಳೆದರೂ ನಮ್ಮ ಬೇರುಗಳನ್ನು ಕೈಬಿಡಬಾರದು. ಯಾವಾಗ ನಿಮ್ಮಲ್ಲಿ ಅಹಂಕಾರ ಬೆಳೆಯುತ್ತದೋ, ಆಗ ಮೋದಿ ಅಲ್ಲ, ಇಡೀ ಸಮುದಾಯವೂ ಕೂಡ ನಿಮ್ಮನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎಗೆ 353 ಸ್ಥಾನ ಕೊಟ್ಟಿರುವ ದೇಶದ ಜನ ನಿಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಎನ್‍ಡಿಎಗೆ ಈ ಪರಿಯ ಜನ ಬೆಂಬಲ ದೊರೆತಿರುವುದಕ್ಕೆ ನಾವು ಖುಷಿ ಪಡುವುದಕ್ಕಿಂತ ಇನ್ನಷ್ಟು ಎಚ್ಚೆತ್ತುಕೊಳ್ಳ ಬೇಕು. ಯಾಕೆಂದರೆ ನಮ್ಮ ಯಶಸ್ಸು ನಮ್ಮ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಈ ಜವಾಬ್ದಾರಿಯನ್ನು ಎಲ್ಲರೂ ಸಮರ್ಥವಾಗಿ ನಿಭಾಯಿಸಬೇಕು. ಜನರ ಈ ವಿಶ್ವಾಸ ವನ್ನು ನಾವು ಉಳಿಸಿಕೊಳ್ಳಬೇಕು. ಜನರು ನಮ್ಮನ್ನು ಗೆಲ್ಲಿಸಿರುವುದು ನಮ್ಮ ಸೇವಾ ಮನೋಭಾವವನ್ನು ನೋಡಿ ಅಷ್ಟೇ. ನಮ್ಮ ಅಧಿಕಾರ ಎಂದೂ ಮತದಾರರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು. ನನ್ನ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗ ಅಷ್ಟೇ. ನಾನೂ ಕೂಡ ನಿಮ್ಮಂತೆಯೇ ಓರ್ವ ಸಂಸದ. ಮತದಾರರ ಪ್ರಬುದ್ಧತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದ ಜನರು ಹೊಸ ನಾಯಕತ್ವವನ್ನು ಗುರುತಿಸಿ ದ್ದಾರೆ. ಅವರು ಸಕಾರಾತ್ಮಕವಾಗಿ ಮತದಾನ ಮಾಡಿದ್ದಾರೆ.

ದೇಶದಲ್ಲಿ ಉತ್ತಮ ಕೆಲಸಗಳಾಗಬೇಕೆಂದು ನಮ್ಮನ್ನು ಜನ ಬೆಂಬಲಿಸಿದ್ದಾರೆ. ದೇಶದ ಅಭಿವೃದ್ಧಿಯ ಕನಸಿಗೆ 130 ಕೋಟಿ ಜನ ಸಾಥ್ ನೀಡಿದ್ದಾರೆ ಎಂದು ಹೇಳಿದರು.

17 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತದಾನವಾಗಿದೆ. ಈ ಸಲದ ಚುನಾವಣೆ ವಿಶೇಷವಾಗಿತ್ತು. ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ. ನನಗೆ ದೇಶದಲ್ಲಿ ಮಾತೃಶಕ್ತಿ ಸಿಕ್ಕಿದೆ. ಅಡ್ವಾನಿ, ವಾಜಪೇಯಿ, ಮುರಳಿ ಮನೋಹರ ಜೋಷಿ ಅವರುಗಳು ಪಕ್ಷವನ್ನು ಸುಭದ್ರವಾಗಿ ಮುನ್ನಡೆಸಿದ್ದಾರೆ. ಭಾರತದ ಏಕತೆ ಅಖಂಡತೆಯಲ್ಲಿ ಅವರು ನಂಬಿಕೆ ಇಟ್ಟಿದ್ದರು. ಎನ್‍ಡಿಎ ವಿಶೇಷತೆ ಏನು ಎಂಬುದನ್ನು ರಾಜಕೀಯ ತಜ್ಞರು ಅರಿತುಕೊಳ್ಳಬೇಕು. ಅಡ್ವಾನಿ, ವಾಜಪೇಯಿ, ಜೋಷಿ ಅವರ ಕಾಲದಲ್ಲಿದ್ದ ವಿಶ್ವಾಸವನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಎನ್‍ಡಿಎ ಎಂದರೆ ಎನರ್ಜಿ ಹಾಗೂ ಒಗ್ಗಟ್ಟು. ಅದನ್ನು ನಾವು ಮುಂದುವರೆಸಿದ್ದೇವೆ ಎಂದು ಮೋದಿ ಹೇಳಿದರು. ಸಚಿವ ಸ್ಥಾನ ಕೆಲವರಿಗೆ ಮಾತ್ರ ನೀಡಲಾಗುತ್ತದೆ. ನಾವು ಪ್ರಧಾನಿ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಸಚಿವ ಸ್ಥಾನ ನೀಡಲಾಗುವುದು, ಬನ್ನಿ ಎಂದು ಹೇಳಿದರೆ, ಅದನ್ನು ನಂಬಬೇಡಿ. ಆ ಕರೆಯನ್ನು ಪರೀಕ್ಷೆ ಮಾಡಿಕೊಳ್ಳಿ. ನೀವು ಸಚಿವರಾಗುತ್ತೀರಿ ಎಂದು ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದರೆ ಟಿವಿ ಆಫ್ ಮಾಡಿ ಎಂದು ಹೇಳಿದ ಮೋದಿ, ಜನತಾ ಜನಾರ್ಧನರು ನೀಡುವ ಭಿಕ್ಷೆಯಿಂದ ನಾವು ಇಲ್ಲಿದ್ದೇವೆ. ಅವರ ಪರವಾಗಿ ಕೆಲಸ ಮಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ. ನೀವು ಯಾವುದೇ ಹೇಳಿಕೆ ನೀಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಿ ಎಂದು ನೂತನ ಸಂಸದರಿಗೆ ಮೋದಿ ಕಿವಿಮಾತು ಹೇಳಿದರು.

2014ರಲ್ಲಿ ಪ್ರಧಾನಿ ಆದಾಗ ಸಂಸತ್‍ನ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದ ಮೋದಿ, ಇಂದು ಎರಡನೇ ಬಾರಿಗೆ ಎನ್‍ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದಾಗ ಸಂವಿಧಾನ ಪುಸ್ತಕಕ್ಕೆ ನಮಸ್ಕರಿಸಿದರು. ಈ ವೇಳೆ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾನಿ ಮತ್ತು ಮುರಳಿ ಮನೋಹರ ಜೋಷಿ ಹಾಗೂ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲು ಮುಟ್ಟಿ ಮೋದಿ ಆಶೀರ್ವಾದ ಪಡೆದರು.

ಈ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾನಿ, ಮುರಳಿ ಮನೋಹರ ಜೋಷಿ, ರಾಜಾನಾಥ್ ಸಿಂಗ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಸ್ಮøತಿ ಇರಾನಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ, ಎಲ್‍ಜೆಪಿ ಮುಖಂಡ ರಾಮ್‍ವಿಲಾಸ್ ಪಾಸ್ವಾನ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಹಾಗೂ ಎನ್‍ಡಿಎ ಮೈತ್ರಿ ಕೂಟದ 353 ಸಂಸದರು ಉಪಸ್ಥಿತರಿದ್ದರು.

Translate »