ರಾಹುಲ್ ಗಾಂಧಿ ರಾಜೀನಾಮೆ ನಿಲುವು ತಿರಸ್ಕರಿಸಿದ ಕಾಂಗ್ರೆಸ್ ಕಾರ್ಯಕಾರಿಣಿ
ಮೈಸೂರು

ರಾಹುಲ್ ಗಾಂಧಿ ರಾಜೀನಾಮೆ ನಿಲುವು ತಿರಸ್ಕರಿಸಿದ ಕಾಂಗ್ರೆಸ್ ಕಾರ್ಯಕಾರಿಣಿ

May 26, 2019

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಲು ಮುಂದಾದ ರಾಹುಲ್‍ಗಾಂಧಿ ಅವರ ನಿಲುವನ್ನು ಸರ್ವಾನು ಮತದಿಂದ ತಿರಸ್ಕರಿಸಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ, ಪಕ್ಷವನ್ನು ಪುನರ್ ರಚಿಸುವ ಅಧಿಕಾರವನ್ನು ರಾಹುಲ್ ಗಾಂಧಿ ಅವರಿಗೆ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗಾಗಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ. ಕಾಂಗ್ರೆಸ್ ಕಾರ್ಯಕಾರಿಣಿ ಅದನ್ನು ಸರ್ವಾನುಮತದಿಂದ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ನಾಯಕತ್ವವನ್ನು ಕೊಂಡಾಡಿರುವ ಕಾಂಗ್ರೆಸ್ ನಾಯಕರು, ಪಕ್ಷವನ್ನು ಪುನರ್ ರಚಿಸುವ ಸಂಪೂರ್ಣ ಅಧಿ ಕಾರವನ್ನು ರಾಹುಲ್ ಗಾಂಧಿಗೆ ನೀಡುವ ನಿರ್ಣಯವೊಂದನ್ನು ಸಮಿತಿ ಅಂಗೀಕರಿಸಿದೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಛತ್ತೀಸ್ ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ,ಮೋತಿಲಾಲ್ ವೋರಾ, ಎ.ಕೆ.ಆಂಟನಿ, ಅಹಮದ್ ಪಟೇಲ್, ಗುಲಾಂ ನಬಿ ಅಜಾದ್, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕಾರಿಣಿಯ ವಿಶೇಷ ಆಹ್ವಾನಿತ ರಾಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಪಕ್ಷದ ಶಾಸಕರೊಂದಿಗೆ ಸಭೆ ನಡೆಸುತ್ತಿರುವ ಕಾರಣ ಅವರು ಸಭೆಗೆ ಹಾಜರಾಗಿಲ್ಲ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಕಳೆದ ಡಿಸೆಂಬರ್ 2018ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅಲ್ಲಿ ಕೇವಲ ಒಂದು ಲೋಕಸಭಾ ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗಿದ್ದು, ಗೆದ್ದಿರುವ ಲೋಕಸಭಾ ಅಭ್ಯರ್ಥಿ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಎಂಬುದು ವಿಶೇಷವಾಗಿದೆ.

ಕಮಲನಾಥ್ ನೇತೃತ್ವದ, ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ಬಹುಮತ ಹೊಂದಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಇತ್ತೀಚೆಗೆ ಅಂತ್ಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ತನ್ನ ಸ್ಥಾನಗಳ ಸಂಖ್ಯೆಯಲ್ಲಿ ಕೇವಲ 8 ಅನ್ನು ಮಾತ್ರ ಹೆಚ್ಚಿಸಿಕೊಂಡಿದೆ.

Translate »