ಪ್ರತಿ ಹೆಜ್ಜೆಯಲ್ಲೂ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ
ಮೈಸೂರು

ಪ್ರತಿ ಹೆಜ್ಜೆಯಲ್ಲೂ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ

May 26, 2019

ಬೆಂಗಳೂರು: ಉತ್ತಮ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸಿ ಆಡಳಿತ ಯಂತ್ರದ ಮೇಲೆ ಬಿಗಿ ಹಿಡಿತ ಸಾಧಿಸಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಕುಮಾರ ಸ್ವಾಮಿ ಅವರು, ಸಿದ್ದರಾಮಯ್ಯ ನಿವಾಸಕ್ಕೆ ಶುಕ್ರವಾರ ತೆರಳಿ ಸುದೀರ್ಘ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಸಲಹೆ ನೀಡಿದ್ದಾರೆ.

ಕಳೆದ ಒಂದು ವರ್ಷದಲ್ಲಿ ನಿಮ್ಮ ವಿಷಯದಲ್ಲಿ ನಾನೂ ತಪ್ಪಾಗಿ ನಡೆದು ಕೊಂಡಿದ್ದೇನೆ, ನಿಮ್ಮಿಂದಲೂ ತಪ್ಪಾ ಗಿದೆ, ಆಗಿದ್ದನ್ನು ಮರೆಯೋಣ, ಮುಂದಿನ ನಾಲ್ಕು ವರ್ಷಗಳಲ್ಲಿ ಪಕ್ಷ ಸಂಘಟನೆ ಗಮನದಲ್ಲಿಟ್ಟುಕೊಂಡು ಜನಪರ ಆಡಳಿತ ನೀಡೋಣ.

ಪ್ರತಿ ಹೆಜ್ಜೆಯಲ್ಲೂ ನಿಮಗೆ ಬೆನ್ನೆಲು ಬಾಗಿ ನಿಲ್ಲುತ್ತೇನೆ, ಪಕ್ಷದ ವರಿಷ್ಠರು ಕರ್ನಾಟಕದಲ್ಲಿ ಪಕ್ಷ ಸಂಘಟನೆ ಭಾರ ವನ್ನು ನನ್ನ ಹೆಗಲಿಗೆ ಹಾಕಿದ್ದಾರೆ, ಈ ಕಾರ್ಯದಲ್ಲಿ ನಿಮ್ಮ ಸಹಕಾರದ ಅಗತ್ಯವೂ ಇದೆ. ನೀವು ರಾಜೀನಾಮೆ ನೀಡುವ ಮಾತು ಎಂತಹುದೇ ಸಂದರ್ಭದಲ್ಲಿ ಬರಬಾರದು, ಬಿಜೆಪಿಯೇತರ ಆಡಳಿತ ರಾಜ್ಯ ಇರುವ ರಾಜ್ಯಗಳಲ್ಲಿ ನಮ್ಮದೂ ಒಂದು, ಈ ಸರ್ಕಾರವನ್ನು ಭದ್ರ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ಒಬ್ಬ ಸದಸ್ಯನೂ ಆಚೆ ಹೋಗದ ರೀತಿ ನೋಡಿಕೊಳ್ಳುತ್ತೇನೆ, ನಾನು ದೂರವಾಣಿಯಲ್ಲಿ ಹೇಳಿದ ರೀತಿ ನಿಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಶಾಸಕರಿಗೂ ಸಮಯ ಮೀಸಲಿಡಿ, ಅವರ ಕಷ್ಟ-ಸುಖಗಳನ್ನು ಆಲಿಸಿ, ಯಾರನ್ನೂ ಕಡೆಗಾಣಿಸಬೇಡಿ, ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಎಂಬ ತಾರತಮ್ಯ ಬೇಡ, ಇಷ್ಟು ಮಾಡಿದರೆ ನಾನು ಉಳಿದದ್ದನ್ನು ನೋಡಿಕೊಳ್ಳು ತ್ತೇನೆ. ಇನ್ನು ಮುಂದೆ ಯಾವೊಬ್ಬ ಶಾಸಕನೂ ನಿಮ್ಮ ನಾಯಕತ್ವದ ಬಗ್ಗೆಯಾಗಲಿ, ಆಡಳಿತದ ಬಗ್ಗೆಯಾಗಲಿ ಬಹಿರಂಗವಾಗಿ ಚರ್ಚಿಸಲು ಆವಕಾಶ ನೀಡುವುದಿಲ್ಲ.

ಸಮಸ್ಯೆಗಳು ಎದುರಾದರೆ, ಅವುಗಳನ್ನು ನಾಲ್ಕು ಗೋಡೆ ಮಧ್ಯೆಯೇ ಬಗೆಹರಿಸಿ ಕೊಳ್ಳೋಣ, ಇನ್ನು ಮುಂದೆ ಸಾರ್ವಜನಿಕರು ಮತ್ತು ಪ್ರತಿಪಕ್ಷಗಳಿಗೆ ಸುದ್ದಿ ಆಹಾರವಾ ಗುವುದು ಬೇಡ ಎಂದರು. ಸಿದ್ದರಾಮಯ್ಯ ಅವರ ಈ ಸಲಹೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದ ಕುಮಾರಸ್ವಾಮಿ, ಶಾಸಕರ ಕೆಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕವಾಗಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ, ಇದರ ಬಗ್ಗೆ ಶಾಸಕರಿಗೂ ಅರಿವು ಮೂಡುವಂತೆ ಮಾಡಬೇಕು ಎಂದು ಹೇಳಿದ್ದಾರೆ.

Translate »