ಜನರನ್ನು ಅಲೆದಾಡಿಸುವ ತಾಲೂಕು ಕಚೇರಿ:  ತಾಪಂ ಕೆಡಿಪಿ ಸಭೆಯಲ್ಲಿ ರಾಂಗ್ ಆದ ಅಧ್ಯಕ್ಷ ರಂಗೇಗೌಡ 
ಹಾಸನ

ಜನರನ್ನು ಅಲೆದಾಡಿಸುವ ತಾಲೂಕು ಕಚೇರಿ: ತಾಪಂ ಕೆಡಿಪಿ ಸಭೆಯಲ್ಲಿ ರಾಂಗ್ ಆದ ಅಧ್ಯಕ್ಷ ರಂಗೇಗೌಡ 

July 11, 2019

ಬೇಲೂರು, ಜು.10- ತಾಲೂಕು ಕಚೇರಿಯ ಕಾರ್ಯವೈಖರಿ ಜನವಿರೋಧಿಯಂತಿದೆ, ವಿವಿಧ ಸೇವೆಗಳನ್ನು ಬಯಸಿ ಹೋಗುವ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ, ತಾಲೂಕು ಕೇಂದ್ರದ ಸರಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಮತ್ತು ಸಿಬ್ಬಂದಿ ಕೊರತೆಯಿಂದ ರೋಗಿಗಳು ಬಸವಳಿಯುತ್ತಿದ್ದಾರೆ, ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್‍ಗಳ ಕರ್ತವ್ಯಲೋಪ

ಈ ವಿಚಾರಗಳು ತಾಲೂಕು ಪಂಚಾಯಿತಿ ಯಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಬಹಳ ಮುಖ್ಯ ವಾಗಿ ಪ್ರಸ್ತಾಪವಾದವು. ಕೆಲವು ಸದಸ್ಯರು ತಾಲೂಕು ಆಡಳಿತದಲ್ಲಿನ ಲೋಪಗಳ ಬಗ್ಗೆ ತೀವ್ರ ಅಸಮಾಧಾನಗಳು ವ್ಯಕ್ತಪಡಿಸಿದರು.

ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಬಹಳ ಸತಾ ಯಿಸಲಾಗುತ್ತಿದೆ. ವೃದ್ಧಾಪ್ಯ ವೇತನ ಮತ್ತಿತರ ಕೆಲಸ ಗಳನ್ನು ಮಾಡಿಕೊಡಲು ತಿಂಗಳುಗಟ್ಟಲೇ ಅಲೆದಾಡಿ ಸುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಹಲವು ದಿನಗಳ ಕಾಲ ವೃಥಾ ಅಲೆದಾಡುವಂತಾಗಿದೆ.  ಇದರಿಂದಾಗಿ ಅವರು ಹಲವು ದಿನಗಳ ದುಡಿಮೆ ಕಳೆದುಕೊಳ್ಳುವಂತಾಗಿದೆ. ರೈತಾಪಿ ವರ್ಗದ ಜನರಿಗೂ ಪಹಣಿ ಮತ್ತಿತರ ದಾಖಲೆಗಳನ್ನು ಪಡೆದು ಕೊಳ್ಳಲು ಬಹಳ ಕಷ್ಟವಾಗುತ್ತಿದೆ ಎಂದು ತಾಪಂ ಅಧ್ಯಕ್ಷ ರಂಗೇಗೌಡ ತಮ್ಮ ತೀವ್ರ ಅಸಮಾಧಾನ ವನ್ನು ವ್ಯಕ್ತಪಡಿಸಿದರು. ನೀರಿನ ಅಭಾವ ಇರುವ ತಾಲೂಕಿನ ವಿವಿಧ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ಇದೇ ಜು.30ರಿಂದ ಕಡಿತಗೊಳಿಸುವ ಸೂಚನೆ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತು.ಈ ಸಂದರ್ಭ ಸಿಟ್ಟಿಗೆದ್ದ ತಾಪಂ ಅಧ್ಯಕ್ಷರು, ಟ್ಯಾಂಕರ್ ಮೂಲಕ ನೀರು ಸರಬರಾಜು ನಿಲ್ಲಿಸಲಾಗದು ಎಂದರು.

ತಾಲೂಕಿನ ಮಲೆನಾಡಿನ ಭಾಗದಲ್ಲಷ್ಟೇ ಅಲ್ಪ ಸ್ವಲ್ಪ ಮಳೆಯಾಗಿದೆ. ಮತ್ತಿತರೆಡೆ ನೀರಿಗಾಗಿ ಹಾಹಾಕಾರ ಪರಿಸ್ಥಿತಿ ಹಾಗೆಯೇ ಮುಂದುವರೆ ದಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಈ ಕುರಿತು ಸೂಕ್ತ ಗಮನಹರಿಸಬೇಕಿದೆ ಎಂದೂ ಹೇಳಿದರು. ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡಿದವರ ಬಿಲ್ ಬಾಕಿಯನ್ನು ತಕ್ಷಣವೇ ಪಾವತಿಸಬೇಕು. ನೀರಿನ ವಿಚಾರದಲ್ಲಿ ತಾರತಮ್ಯ ಸಲ್ಲದು ಎಂದರು.

ತಾಲೂಕಿನ ಘಟ್ಟದಹಳ್ಳಿಯ ಗ್ರಾಮ ಲೆಖ್ಖಿಗರು ಬೆಳಗಿನಿಂದ ಸಂಜೆವರೆಗೂ ಮದ್ಯವ್ಯಸನಿಯಾಗಿ ರಸ್ತೆಯಲ್ಲೇ ಅತ್ತಿತ್ತ ತಿರುಗಾಡುತ್ತಿರುತ್ತಾರೆ. ಸಮ ರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅವರನ್ನು ವಾಪಸ್ ಕರೆಸಿಕೊಳ್ಳಿ ಎಂದೂ ಸದಸ್ಯರು ತಾಲೂಕು ಆಡಳಿತಕ್ಕೆ ಒತ್ತಾಯ ಮಾಡಿದರು.

ಅರೇಹಳ್ಳಿ ನಾಡ ಕಚೇರಿಯಲ್ಲಿ ಕಂಪ್ಯೂಟರ್ ಸರಿ ಇಲ್ಲದ ಕಾರಣ ಸಾರ್ವಜನಿಕರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಗ್ರಾಪಂ ಉಪಾಧ್ಯಕ್ಷೆ ಜಮುನಾ ಅಣ್ಣಪ್ಪ ದೂರಿದರು.

ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲು ಒಂದೇ ಕೊಠಡಿ ಇದೆ. ಇದರಿಂದ ಮಹಿಳೆ ಯರು ಸೇರಿದಂತೆ ಹಲವರು ಚುಚ್ಚುಮದ್ದು ಹಾಕಿಸಿ ಕೊಳ್ಳಲು ಮುಜುಗರಪಡುತ್ತಾರೆ. ಈ ಕುರಿತು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಬೇಲೂರು ಒತ್ತಾಯಿಸಿದರು.

ಅಲ್ಲದೇ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಒದಗಿ ಸುವ ಆಹಾರ ಸರಬರಾಜು ಗುತ್ತಿಗೆಯನ್ನು ಹಲ ವಾರು ವರ್ಷಗಳಿಂದ ಒಬ್ಬರೇ ಪಡೆಯುತ್ತಿದ್ದಾರೆ. ಈಗ ಆಸ್ಪತ್ರೆಯ ಕ್ಯಾಂಟೀನ್ ನಿರ್ವಹಣೆಯೂ ಅವರ ಹೆಸರಿಗೇ ಬಂದಿರುವುದರಲ್ಲಿ ಏನೋ ಅವ್ಯವಹಾರ ನಡೆದಿರಬೇಕು ಎನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಆಸ್ಪತ್ರೆಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.

ತಾಲೂಕಿನಲ್ಲಿ ಆರೋಗ್ಯ ರಕ್ಷಾ ಕಾರ್ಡುಗಳ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಗಮನಹರಿಸ ಬೇಕು ಎಂದು ತಾಪಂ ಅಧ್ಯಕ್ಷ ಸಲಹೆ ಮಾಡಿದರು.

ತಾಲೂಕಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಾರ್ಡನ್‍ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀರು ತ್ತಿದೆ. ಅಲ್ಲದೇ 3 ತಿಂಗಳಿಗೊಮ್ಮೆ ಅಕ್ಕಿ ಮೊದ ಲಾದ ಆಹಾರ ಸಾಮಗ್ರಿಗಳನ್ನು ತರುತ್ತಿರುವುದ ರಿಂದ ಆಹಾರ ಪದಾರ್ಥಗಳು ಮುಗ್ಗಲು ಹಿಡಿ ಯುತ್ತಿವೆ. ಹಾಗಾಗಿ ಇನ್ನು ಮುಂದೆ ತಿಂಗಳಿ ಗೊಮ್ಮೆ ಆಹಾರ ಪದಾರ್ಥಗಳನ್ನು ತರುವಂತಹ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಅಧ್ಯಕ್ಷರು, ಆಹಾರ ಪದಾರ್ಥಗಳ ಸರಬರಾಜು ಗುತ್ತಿಗೆ ದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ರವಿ ಕುಮಾರ್ ಹಾಗೂ ತಾಲೂಕಿನ ವಿವಿಧ ಇಲಾಖೆ ಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ಆಲೂಗಡ್ಡೆ ಬೆಳೆ ನಾಶ

ತಾಲೂಕಿನಲ್ಲಿ ಈ ಬಾರಿ 500 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ನಡೆದಿದೆ. ಅದರಲ್ಲಿ 250 ಹೆಕ್ಟೇರ್ ಪ್ರದೇಶಗಳ ಆಲೂಗಡ್ಡೆ ಬೆಳೆಗಳು ಹವಾಮಾನ ವೈಪರಿತ್ಯದ ಪರಿಣಾಮ ರೋಗಕ್ಕೆ ತುತ್ತಾಗಿದ್ದು, ಬೆಳೆ ಸಂಪೂರ್ಣ ನಾಶವಾಗಿದೆ. ಈ ಕುರಿತು ಜಿಪಿಎಸ್ ಸರ್ವೆ ಮಾಡಲಾಗಿದೆ. ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರವನ್ನು ನೇರವಾಗಿ ದೊರಕಿಸಿಕೊಡಲೂ ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ ತಿಳಿಸಿದರು. ಇಲ್ಲಿ ಯಾವುದೇ ಬೋಗಸ್ ವ್ಯವಹಾರಕ್ಕೆ ಅವಕಾಶವಿಲ್ಲ ಎಂದೂ ಸ್ಪಷ್ಟಪಡಿಸಿದರು.

ಕೃಷಿ ಇಲಾಖಾ ಸಹಾಯಕ ನಿರ್ದೇಶಕಿ ಕಾವ್ಯ ಅವರು, ರಸಗೊಬ್ಬರ, ಕ್ರಿಮಿನಾಶಕ ಮತ್ತಿತರ ರೈತೋಪಯೋಗಿ ಪದಾರ್ಥಗಳ ವಿಕ್ರಯ ಮತ್ತು ಸರಬರಾಜು ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಿತರಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ದೂರುಗಳು ಕೇಳಿಬಂದರೆ ದಾಸ್ತಾನುದಾರರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.