ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ
ಮಂಡ್ಯ

ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

September 13, 2018

ಮಂಡ್ಯ: ಗೌರಿ ಗಣೇಶ ಹಬ್ಬದ ಸಂಭ್ರಮವನ್ನಾಚರಿಸಲು ನಾಡಿನ ಜನತೆ ಸಜ್ಜಾಗಿದ್ದಾರೆ. ಆದರೆ, ಈ ಸಂಭ್ರಮಕ್ಕೆ ಬೆಲೆಯೇರಿಕೆಯ ಬಿಸಿ ತಟ್ಟಿದೆ. ಗಣೇಶನ ಹಬ್ಬದ ಮುನ್ನಾ ದಿನವಾದ ಬುಧವಾರ ಜನ-ಹೂ ಹಣ್ಣುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮಾರುಕಟ್ಟೆಯ ತುಂಬೆಲ್ಲ ಜನತೆ ಗಿಜಿಗಿಡುತ್ತಿದ್ದ ದೃಶ್ಯಕಂಡು ಬಂತು.

ಹಬ್ಬಕ್ಕೆ ಬೇಕಾದ ಹೂವು ಹಣ್ಣುಗಳು, ಬಾಳೆಕಂಬ, ತಾವರೆ, ಡೇರೆ ಹೂವುಗಳ ಮಾರಾಟ ಭರ್ಜರಿಯಾಗಿಯೇ ನಡೆಯು ತ್ತಿತ್ತು. ಈ ಹಿಂದಿಗಿಂತ ಇಂದು ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾದ ಸ್ಥಿತಿ ಗ್ರಾಹಕ ರದ್ದಾಗಿತ್ತು. ಪಚ್ಚ ಬಾಳೆಗಿಂತ ಏಲಕ್ಕಿ ಬಾಳೆಯ ಬೆಲೆ ದುಬಾರಿಯಾಗಿತ್ತು. ಕೆಜಿಗೆ 80 ರೂ.ಇದ್ದುದು 100 ರ ಗಡಿ ದಾಟಿತ್ತು.

ಸೇಬು 100 ರಿಂದ 150, ದಾಳಿಂಬೆ 80, ಸೀಬೆ 80, ಕಿತ್ತಳೆ- ಮೂಸಂಬಿ 60, ದ್ರಾಕ್ಷಿ ಕಪ್ಪು ಮತ್ತು ಸೀಡ್ ಲೆಸ್ 120 ರೂಗಳಿಗೆ ನಿಗದಿಯಾಗಿತು.

ಗಗನಕ್ಕೇರಿದ ಹೂವಿನ ಬೆಲೆ: ಗೌರಿ-ಗಣೇಶ ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿತ್ತು. ಗುಲಾಬಿ ಒಂದಕ್ಕೆ 5ರೂ. ಕಮಲ ಜೋಡಿಗೆ 20 ರಿಂದ 25 ರೂಗೆ ಮಾರಾಟವಾಗುತ್ತಿತ್ತು. ಉಳಿ ದಂತೆ ಕನಕಾಂಬರ, ಚೆÀಂಡು ಮಲ್ಲಿಗೆ, ಸೇವಂತಿಗೆ, ದುಂಡು ಮಲ್ಲಿಗೆ, ಕಾಕಡ, ಡೇರೆ ಹೂಗಳ ಬೆಲೆ ಇತರೆ ದಿನಗಳಿಗಿಂತ ದುಪ್ಪಟ್ಟು ಬೆಲೆ ಹೆಚ್ಚಳವಾಗಿತ್ತು.

ಉಡಿ ತುಂಬುವ, ಬಾಗಣ, ಸಾಮಗ್ರಿಗಳ ಬೆಲೆಯೂ ದುಪ್ಪಟ್ಟಾಗಿತ್ತು. ಒಂದು ಸೆಟ್ಟ್ ಉಡಿ ತುಂಬುವ ಸಾಮಾನಿಗೆ 150 ರೂ. ಬೆಲೆ ನಿಗದಿಯಾಗಿತ್ತು. ಬೆಲೆ ಹೆಚ್ಚಾಗಿ ದ್ದರೂ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಅಗತ್ಯ ಸಾಮಗ್ರಿಗಳ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.

ಮಣ್ಣಿನ ಗಣಪತಿಗೆ ಫುಲ್ ಡಿಮ್ಯಾಂಡ್: ಜೇಡಿಮಣ್ಣಿನ ಗಣಪತಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಪರಿಸರ ಪ್ರೇಮ ಮೆರೆಯುತ್ತಿರುವ ಜಿಲ್ಲೆಯ ಜನತೆ ಜೇಡಿಮಣ್ಣಿನ ಗಣೇಶ ಪ್ರತಿ ಷ್ಠಾಪನೆಗೆ ಮುಂದಾಗಿರುವುದು ಕಂಡು ಬಂತು.

ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ವಿಜೇಶ ಚಾರ್ ಎಂಬಾತ ಜೇಡಿಮಣ್ಣಿನಿಂದ ಸಾವಿರಾರು ಗಣೇಶ ಮೂರ್ತಿಗಳನ್ನು ತಯಾರು ಮಾಡಿದ್ದು, ಇವರ ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಜಿಲ್ಲೆಯ ನಾನಾ ಭಾಗಗಳಿಂದ ಜನರು ಆಗಮಿಸಿ ಖರೀದಿ ಮಾಡುತ್ತಿದ್ದುದು ಕಂಡು ಬಂತು.

ವಿಶೇಷವಾಗಿ ಕಮಲ, ಹುಲಿ, ಪಾರ್ವತಿ, ಜಿಂಕೆ, ಆನೆ, ಗಿಳಿ ಸೇರಿದಂತೆ ವಿವಿಧ ಆಕೃತಿಗಳ ಗಣಪತಿಗಳನ್ನು ತಯಾರು ಮಾಡಿದ್ದಾರೆ. ಮುಕ್ಕಾಲು ಅಡಿಯಿಂದ 12 ಅಡಿಯವರೆಗೆ ಗಣಪತಿ ಗಳನ್ನು ತಯಾರು ಮಾಡಿದ್ದು, ಕೆಲವರು ಮುಂಗಡ ಕಾಯ್ದಿರಿಸಿದ್ದಾರೆ. ಮೂರ್ತಿಗೆ ರೂಪ ಕೊಡಲು ಪರಿಸರ ಸ್ನೇಹಿ ಬಣ್ಣಗಳನ್ನಷ್ಟೇ ಬಳಸಿರುವುದು ಸಹ ತಯಾರಿಕಾ ಘಟಕದಲ್ಲಿ ಗೋಚರಿಸಿತು.
ಗೌರಿ ಪೂಜೆ: ಗೌರಿ ಗಣೇಶ ವ್ರತಾ ಚರಣೆ ಅಂಗವಾಗಿ ಮಂಡ್ಯದ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿ ಸಿದ್ದ ಶ್ರೀ ಗೌರಿಮೂರ್ತಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.

Translate »