ನಾಳೆಯಿಂದ 29ರವರೆಗೆ ಪುರೋಹಿತರು-ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ನಾಳೆಯಿಂದ 29ರವರೆಗೆ ಪುರೋಹಿತರು-ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿ

July 26, 2019

ಮೈಸೂರು,ಜು.25(ಪಿಎಂ)-ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್ ಅಸೋಸಿಯೇಷನ್ (ಕೆಎಎಸಿಎ) ವತಿಯಿಂದ ರಾಜ್ಯ ಮಟ್ಟದ ಪುರೋಹಿತರ ಹಾಗೂ ಜ್ಯೋತಿಷಿ ಗಳ ಕ್ರಿಕೆಟ್ ಪಂದ್ಯಾವಳಿ ಮೈಸೂರಿನಲ್ಲಿ ಜು.27ರಿಂದ 29ರವರೆಗೆ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ಮೂಗೂರು ಮಧುದೀಕ್ಷಿತ್ ಗುರೂಜಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರೈಲ್ವೆ ವರ್ಕ್‍ಶಾಪ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾವಳಿಗೆ ಜು.27ರಂದು ಬೆಳಿಗ್ಗೆ 10ಕ್ಕೆ ಹಿರಿಯ ಭಾರತೀಯ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಚಾಲನೆ ನೀಡಲಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಬೆಳ ಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಸುಕ್ಷೇತ್ರ ಗದ್ದಿಗೆಯ ಡಾ.ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಬಿ.ಜಿ.ಜ್ಯೋತಿ ಪ್ರಕಾಶ್ ಮಿರ್ಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ಕೆಎಎಸಿಎ ಲಾಂಛನವನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ ಬಿಡುಗಡೆ ಮಾಡಲಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಟೈಸ್ ಬೋರ್ಡ್ ಬಿಡುಗಡೆ ಮಾಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಕೆಎಎಸಿಎ ಮತ್ತು ಪತ್ರಕರ್ತರ ಸಂಘದ ನಡುವೆ ಸ್ನೇಹಪೂರ್ವಕ ಉದ್ಘಾಟನಾ ಪಂದ್ಯ ನಡೆಯಲಿದೆ ಎಂದರು.

ಜು.29ರಂದು ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮ ದಾಸ್ ಬಹುಮಾನ ವಿತರಣೆ ಮಾಡಲಿದ್ದಾರೆ. ತಂಡಗಳಿಗೆ 5 ಸಾವಿರ ರೂ. ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ವಿಜೇತ ತಂಡಕ್ಕೆ 50 ಸಾವಿರ ರೂ. ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನದೊಂದಿಗೆ ಟ್ರೋಫಿ ಪ್ರದಾನ ಮಾಡಲಾಗುವುದು ಎಂದರು. ಅಸೋಸಿಯೇಷನ್‍ನ ಉಪಾಧ್ಯಕ್ಷ ಕೆ.ಪಿ.ಶಾಂತ ಮಹದೇವಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪ್ರಸಾದ್ ಹಲಗೂರು ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »