ನಾಳೆ ಸಂತೇಮರಹಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಚಾ.ನಗರ, ಮೈಸೂರು, ಮಂಡ್ಯ ಜಿಲ್ಲೆ ಸೇರಿ ಬಹಿರಂಗ ಸಮಾವೇಶ
ಚಾಮರಾಜನಗರ

ನಾಳೆ ಸಂತೇಮರಹಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಚಾ.ನಗರ, ಮೈಸೂರು, ಮಂಡ್ಯ ಜಿಲ್ಲೆ ಸೇರಿ ಬಹಿರಂಗ ಸಮಾವೇಶ

April 30, 2018

ಚಾಮರಾಜನಗರ: ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲು ಮೇ 1ರಂದು ಬೆಳಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರೂ ಆದ ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಈ ವಿಷಯ ತಿಳಿಸಿದರು.

ದೆಹಲಿಯಿಂದ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸುವ ನರೇಂದ್ರ ಮೋದಿ, ಮೈಸೂರಿನಿಂದ ಸಂತೇಮರಹಳ್ಳಿಗೆ ಹೆಲಿಕಾಪ್ಟರ್‍ನಲ್ಲಿ ಆಗಮಿಸಲಿದ್ದಾರೆ. ಸಂತೇಮರಹಳ್ಳಿಯಲ್ಲಿ ಆಯೋಜಿಸಿರುವ ಬೃಹತ್ ಬಹಿರಂಗ ಸಭೆಯಲ್ಲಿ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನಿತರ ನಾಯಕರು ಪಾಲ್ಗೊಳ್ಳಲಿದ್ದಾರೆ. ಸುಮಾರು 40 ರಿಂದ 50 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಈಗಾಗಲೇ ಬಿಜೆಪಿ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಸಂತೇಮರಹಳ್ಳಿಗೆ ಆಗಮಿಸಿ ಭಾಷಣ ಮಾಡಿದ ನಂತರ ಆ ಅಲೆ ಬಿರುಗಾಳಿ ಆಗಲಿದೆ. ಇದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಾಂದಿ ಎಂದು ಮಲ್ಲಿಕಾರ್ಜುನಪ್ಪ ತಿಳಿಸಿದರು.
ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಪ್ರಧಾನಿ ಮೋದಿ ಭೇಟಿ ನೀಡದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನಪ್ಪ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಲು ಚಿಂತಿಸಲಾಗಿತ್ತು. ಆದರೆ ಮಳೆ ಬಂದರೆ ಕ್ರೀಡಾಂಣದಲ್ಲಿ ಕಾಲಿಡಲು ಆಗದಂತಹ ಪರಿಸ್ಥಿತಿ ಇದೆ. ಇದಲ್ಲದೇ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತು. ಹೀಗಾಗಿ ಸಂತೇಮರಹಳ್ಳಿಯಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು ಎಂದರು.

ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‍ಗೆ ಪೈಪೋಟಿ ನಡೆಸಿದ್ದ ಎಲ್ಲಾ 6 ಮುಖಂಡರು ಒಗ್ಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕ್ಷೇತ್ರದಲ್ಲಿ ಬಿಜೆಪಿ ಅಲೆ ಇರುವ ಕಾರಣ ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ದೃಷ್ಟಿಯಿಂದ ಚಾಮರಾಜನಗರದಲ್ಲಿ ಬಹಿರಂಗ ಸಭೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತು. ಹೀಗಾಗಿ ಸಂತೇಮರಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಕಾರಣ ಇಲ್ಲ.
– ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿಜೆಪಿ ಅಭ್ಯರ್ಥಿ

ಶಾಸಕರಿಗೆ ಅಧಿಕಾರದ ಮದ: ಜಿಪಂ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, 9 ವರ್ಷಗಳಿಂದ ಕ್ಷೇತ್ರದಲ್ಲಿ ಹಾಗೂ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಕಳೆದ 1 ವರ್ಷದಿಂದ ತರಾತುರಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಸಹ ಅವೈಜ್ಞಾನಿಕವಾಗಿ, ಕಾಮಗಾರಿ ನಡೆಸಲಾಗುತ್ತಿದೆ. ಕಳಪೆ ಕಾಮಗಾರಿ ನಡೆಯುತ್ತಿದೆ. ಆದರೂ ಸಹ ಕ್ಷೇತ್ರದ ಶಾಸಕರು ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದಾರೆ. ಅವರಿಗೆ ಅಧಿಕಾರದ ಮದ ಏರಿದೆದೆ ಎಂದು ಟೀಕಿಸಿದರು. ಜಿಪಂ ಅಧ್ಯಕ್ಷೆ ಜಿ.ನಾಗಶ್ರೀ ಪ್ರತಾಪ್, ಮುಖಂಡರಾದ ನಿಜಗುಣರಾಜು, ಮಂಗಲ ಶಿವಕುಮಾರ್, ಡಾ.ಎ.ಆರ್.ಬಾಲು, ವೆಂಕಟರಮಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಮೌಢ್ಯತೆ ಹಾಗೂ ಮೂಢ ನಂಬಿಕೆಗೆ ಜೋತು ಬಿದ್ದು, ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಒಮ್ಮೆಯೂ ಚಾಮರಾಜನಗರಕ್ಕೆ ಆಗಮಿಸಲಿಲ್ಲ. ಪ್ರಧಾನಮಂತ್ರಿಗಳೂ ಸಹ ಚಾಮರಾಜನಗರಕ್ಕೆ ಕಳಂಕ ತರುತ್ತಿದ್ದಾರೆ.
-ಆರ್.ಧ್ರುವನಾರಾಯಣ್, ಸಂಸದ

ನಾಳೆ ಸಂತೆ, ಜಾತ್ರೆ ನಿಷೇಧ

ಸಂತೇಮರಹಳ್ಳಿ: ವಿಧಾನಸಭಾ ಚುನಾವಣೆ ಸಂಬಂಧ ಸಂತೇ ಮರಹಳ್ಳಿಯಲ್ಲಿ ಮೇ 1ರಂದು ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂತೆ ಮತ್ತು ಇನ್ನಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ.

ಪ್ರಧಾನಿ ಕಾರ್ಯಕ್ರಮಕ್ಕೆ ಬಂದೋಬಸ್ತ್ ವ್ಯವಸ್ಥೆಗೆ ಅಡಚಣೆಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಂದು ವಾಡಿಕೆಯಂತೆ ನಡೆಯುವ ಸಂತೆ ಮತ್ತು ಎಲ್ಲಾ ತರಹದ ಜಾತ್ರೆ, ಸಮಾರಂಭಗಳನ್ನು ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಆದೇಶಿಸಿದ್ದಾರೆ.

Translate »