ಪುಟ್ಟರಂಗಶೆಟ್ಟಿ ಪರ ಸಂಸದ ಧ್ರುವನಾರಾಯಣ್ ಮತ ಯಾಚನೆ
ಚಾಮರಾಜನಗರ

ಪುಟ್ಟರಂಗಶೆಟ್ಟಿ ಪರ ಸಂಸದ ಧ್ರುವನಾರಾಯಣ್ ಮತ ಯಾಚನೆ

April 30, 2018

ಚಾಮರಾಜನಗರ: ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಶಕ ಸಿ.ಪುಟ್ಟರಂಗಶೆಟ್ಟಿ ಪರವಾಗಿ ಸಂಸದ ಆರ್.ಧ್ರುವನಾರಾಯಣ್ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಭಾನುವಾರ ಮತ ಯಾಚಿಸಿದರು.

ತಾಲೂಕಿನ ಮಂಗಲದಲ್ಲಿ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಜತೆಗೂಡಿ ಧ್ರುವನಾರಾಯಣ್ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಮತ ಯಾಚಿಸಿದರು. ನಂತರ ಹರದನಹಳ್ಳಿ, ವೆಂಕಟಯ್ಯನಛತ್ರ, ಕೋಡಿಉಗನೆ, ಬಿಸಿಲವಾಡಿ, ಕೋಳಿಪಾಳ್ಯ, ಚಿಕ್ಕಹೊಳೆ ಚೆಕ್‍ಪೋಸ್ಟ್, ಸಿದ್ದಯ್ಯನಪುರ, ದೊಡ್ಡಮೋಳೆ, ಚಂದಕವಾಡಿ, ಹೆಬ್ಬಸೂರು, ನಾಗವಳ್ಳಿ, ಜ್ಯೋತಿಗೌಡನಪುರ, ಕಾಗಲವಾಡಿ, ಆಲೂರು ಮತ್ತು ದೊಡ್ಡರಾಯಪೇಟೆ ಗ್ರಾಮಗಳಲ್ಲಿ ಧ್ರುವನಾರಾಯಣ್ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪರ ಮತ ಯಾಚಿಸಿದರು.
ಈ ವೇಳೆ ಮಾತನಾಡಿದ ಧ್ರುವನಾರಾಯಣ್, ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಅವರ ಪರವಾದ ಅಲೆ ಇದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ 3ನೇ ಬಾರಿಗೆ ಪುಟ್ಟರಂಗಶೆಟ್ಟಿ ಗೆಲ್ಲುವ ಆತ್ಮವಿಶ್ವಾಸ ನನ್ನಲ್ಲಿದೆ. ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರ ಪ್ರಯೋಜನ ಎಲ್ಲಾ ಸಮಾಜದ ಬಡ ಜನರಿಗೆ ತಲುಪಿದೆ. ಹೀಗಾಗಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಪ್ರಚಾರ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಏ.30ರಂದು ಹನೂರು ಮತ್ತು ಗುಂಡ್ಲುಪೇಟೆ ಕ್ಷೇತ್ರಕ್ಕೆ ಆಗಮಿಸಿ ಮತಯಾಚನೆ ಮಾಡಲಿದ್ದಾರೆ. ಮೇ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ 4 ಕ್ಷೇತ್ರಕ್ಕೂ ಆಗಮಿಸಿ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಧ್ರುವನಾರಾಯಣ್ ತಿಳಿಸಿದರು.
ಮೋದಿ ಅಲೆ ಕುಸಿತ: 2014ರ ಲೋಕಸಭಾ ಚುನಾವಣೆ ವೇಳೆ ಇದ್ದ ನರೇಂದ್ರ ಮೋದಿ ಅವರ ಅಲೆ ಈಗಿಲ್ಲ. ಇದು ಅನೇಕ ಉಪ ಚುನಾವಣೆಗಳಲ್ಲಿ ಸಾಬೀತಾಗಿದೆ. ಜಿಲ್ಲೆಗೆ ನರೇಂದ್ರ ಮೋದಿ ಭೇಟಿ ನೀಡಿದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಜಿಲ್ಲಾ ಕಾಂಗ್ರೆಸ್ ಭದ್ರಕೋಟೆ ಆಗಿದ್ದು, ಇದು ಈ ಚುನಾವಣೆಯಲ್ಲೂ ಸಾಬೀತಾಗಲಿದೆ ಎಂದು ಧ್ರುವನಾರಾಯಣ್ ಹೇಳಿದರು.

ನಾನು ಬಿಜೆಪಿಗೆ ಸೇರುತ್ತೇನೆ ಎಂದು ವ್ಯವಸ್ಥಿತ ರೀತಿಯಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಕಾಂಗ್ರೆಸ್ ನನಗೆ ತಾಯಿ ಸಮಾನ. 4 ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನೇಕೆ ಬಿಜೆಪಿಗೆ ಸೇರುತ್ತೇನೆ? ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಅಪಪ್ರಚಾರಕ್ಕೆ ಕಿವಿಗೊಡಬೇಡಿ.
-ಆರ್.ಧ್ರುವನಾರಾಯಣ್, ಸಂಸದ

ಕ್ಷೇತ್ರದ ವೀಕ್ಷಕ ಮಾಜಿ ಸಂಸದ ವಿಶ್ವನಾಥನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲತಾ ಜಯಣ್ಣ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಕೊತ್ತಲವಾಡಿ ಸೋಮಲಿಂಗಪ್ಪ, ಕಾಗಲವಾಡಿ ಚಂದ್ರು, ಕಾವೇರಿ ಶಿವಕುಮಾರ್, ಸಯ್ಯದ್‍ರಫಿ, ಎ.ಎಸ್.ಗುರುಸ್ವಾಮಿ, ಮುನ್ನ ಶಕುಂತಲ, ಮಲ್ಲಾಜಮ್ಮ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.

Translate »