ಮೈಸೂರು ವಿವಿಗೆ 6ನೇ ಹಂಗಾಮಿ ಕುಲಪತಿಯಾಗಿ ಪ್ರೊ.ಆಯಿಷಾ ಎಂ.ಶರೀಫ್ ನೇಮಕ
ಮೈಸೂರು

ಮೈಸೂರು ವಿವಿಗೆ 6ನೇ ಹಂಗಾಮಿ ಕುಲಪತಿಯಾಗಿ ಪ್ರೊ.ಆಯಿಷಾ ಎಂ.ಶರೀಫ್ ನೇಮಕ

September 22, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 6ನೇ ಹಂಗಾಮಿ ಕುಲಪತಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಆಯಿಷಾ ಎಂ.ಶರೀಫ್ ನೇಮಕವಾಗಿದ್ದಾರೆ.

ಇದುವರೆಗೆ ಮೈವಿವಿ ಹಂಗಾಮಿ ಕುಲಪತಿಗಳಾಗಿದ್ದ ಪ್ರೊ.ಟಿ.ಕೆ.ಉಮೇಶ್ ಅವರ ಡೀನ್ ಶಿಪ್ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಬಾಯಿ ರೂಢಾಬಾಯಿ ವಾಲಾರವರು ಇಂದು ಪ್ರೊ.ಆಯಿಷಾ ಎಂ.ಶರೀಫ್ ಅವರನ್ನು ಹಂಗಾಮಿ ಕುಲಪತಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 2017ರ ಜ.6ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿ ಸ್ಥಾನದಿಂದ ನಿವೃತ್ತಿಯಾದ ನಂತರ ಪ್ರೊ.ಆಯಿಷಾ ಎಂ.ಶರೀಫ್‍ರವರು 6ನೇ ಹಂಗಾಮಿ ಕುಲಪತಿಗಳಾಗಿ ನೇಮಕವಾಗಿದ್ದಾರೆ.

ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಖಾಯಂ ಕುಲಪತಿಗಳ ನೇಮಕ ಮಾಡಿಲ್ಲ. ಖಾಯಂ ಕುಲಪತಿಗಳ ಹುದ್ದೆಗೆ ಅರ್ಹರ ಆಯ್ಕೆ ಮಾಡುವ ಸತ್ಯಶೋಧನಾ ಸಮಿತಿಯಿಂದ ಪ್ರಕ್ರಿಯೆ ನಡೆಯುತ್ತಿರುವ ಹಂತದಲ್ಲೇ ಮತ್ತೊಮ್ಮೆ ಹಂಗಾಮಿ ಕುಲಪತಿಗಳ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

Translate »