ಹೊಳೆನರಸೀಪುರ ತಾಲೂಕು ಆಡಳಿತದ ಪ್ರಗತಿ ಪರಿಶೀಲನಾ ಸಭೆ
ಹಾಸನ

ಹೊಳೆನರಸೀಪುರ ತಾಲೂಕು ಆಡಳಿತದ ಪ್ರಗತಿ ಪರಿಶೀಲನಾ ಸಭೆ

February 11, 2019

ಹೊಳೆನರಸೀಪುರ: ಕುಡಿಯುವ ನೀರಿಗೆ ಆದ್ಯತೆ ಕೊಡಿ. ಯುವ ಮತದಾರರ ನೋಂದಣಿ, ಮತದಾರರ ಪಟ್ಟಿ ಪರಿಷ್ಕರಣೆ, ಸಂಧ್ಯಾ ಸುರಕ್ಷಾ ಹಾಗೂ ವಸತಿ ರಹಿತರನ್ನು ಗುರುತಿಸಲು ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಿಗರಿಗೆ ಪ್ರತಿ ಗ್ರಾಮದಲ್ಲಿ ಮನೆ ಬಾಗಿಲಿಗೆ ತೆರಳಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದರು.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ತಾಲೂಕು ಆಡಳಿತದ ಕಾರ್ಯ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ತಾಲೂಕಿನಲ್ಲಿ ಸಮಸ್ಯೆ ಕೇಳಿ ಬರುತ್ತಿದೆ. ಕೂಡಲೇ ಆಯಾ ಗ್ರಾಪಂಗಳಲ್ಲಿ ಆಧಾರ್ ಸೌಲಭ್ಯ ಕಲ್ಪಿ ಸಲು ಇಒ ಯೋಗೇಶ್‍ಗೆ ಸೂಚಿಸಿದರು.

ಪಿಡಿಒ ಮತ್ತು ಗ್ರಾಮ ಲೆಕ್ಕಾಧಿ ಕಾರಿಗಳೊಂದಿಗೆ ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಪ್ರತಿ ಮನೆ ಗಳಿಗೆ ತೆರಳಿ ವಯೋವೃದ್ಧರನ್ನು, ವಿಶೇಷ ಚೇತನರನ್ನು ಗುರುತಿಸಿ ಪಿಂಚಣಿ ಕೊಡಿಸಿ ಕೊಡಿ. ಇದೇ ಹಂತದಲ್ಲಿ ವಸತಿ ರಹಿತರನ್ನು ಗುರುತಿಸಬೇಕು ಎಂದರು.

ಅರಣ್ಯ ಇಲಾಖೆ ಪ್ರಗತಿ ವರದಿ ಪಡೆದ ಜಿಲ್ಲಾಧಿಕಾರಿ, ವರ್ಷಕ್ಕೆ 4 ಲಕ್ಷ ಸಸಿ ಬೆಳೆಸಿ ಯಾರಿಗೆ ಕೊಡುತ್ತೀರಾ? ಸಸಿ ಪಡೆದ ಫಲಾನುಭವಿಗಳು ಗಿಡ ಬೆಳೆಸಿದ್ದರೆ ತಾಲೂಕು ಸುಂದರ ವನ ಆಗುತ್ತಿತ್ತಲ್ಲವೇ? ಎಂದು ಅರಣ್ಯಾಧಿಕಾರಿ ದಯಾನಂದ್‍ನ್ನು ಪ್ರಶ್ನಿಸಿದರು. ಇನ್ನು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ. ಚುನಾವಣೆ ಘೋಷಣೆಯಾದರೂ ಚಿಂತೆ ಇಲ್ಲ. ಬೇಸಿಗೆ ಹೊತ್ತಿಗೆ ಸಮಸ್ಯೆ ಎದುರಿಸಲು ಸಜ್ಜಾಗಿ ಎಂದು ಜಿಪಂ ಎಂಜಿನಿಯರ್ ಪ್ರಭುಗೆ ತಿಳಿಸಿದರು.

ಹೀಗೆ ತಾಲೂಕಿನ ಹಲವು ಕುಂದು ಕೊರತೆಗಳನ್ನು ಅಧಿಕಾರಿಗಳೊಟ್ಟಿಗೆ ಚರ್ಚಿಸಿದರು. ಇದೇ ವೇಳೆ ತಹಶೀಲ್ದಾರ್ ಶ್ರೀನಿವಾಸ್ ಮತ್ತು ಹಲವು ಇಲಾಖೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *