ಮೈಸೂರು, ಜ.9(ಎಸ್‍ಬಿಡಿ)- ಜೆಎನ್‍ಯು ಪ್ರಕರಣ ಇಡೀ ದೇಶದಲ್ಲಿ ಕಳವಳ ಸೃಷ್ಟಿಸಿದೆ ಎಂದು ಸಾಹಿತಿ ಡಾ.ಅರವಿಂದ ಮಾಲಗತ್ತಿ ಆತಂಕ ವ್ಯಕ್ತಪಡಿಸಿದರು.
ಮೈಸೂರಿನ ಕಲಾಮಂದಿರದ ಕಿಂದರಿ ಜೋಗಿ ಆವರಣದಲ್ಲಿ ನಡೆದ ಪ್ರಗತಿಪರ ಚಿಂತಕರ ಸಭೆಯಲ್ಲಿ ಮಾತನಾಡಿದ ಅವರು, ಮಾರಕಾಸ್ತ್ರಗಳನ್ನು ಹಿಡಿದು ವಿವಿಗೆ ನುಗ್ಗುತ್ತಾರೆ ಎಂದರೆ ಆತಂಕವಾಗುತ್ತದೆ. ಶಿಕ್ಷಣ ಸಂಸ್ಥೆಗಳೆಂದರೆ ದೇವಾಲಯದಂತೆ. ಆದರೆ ಸ್ಮಶಾನ ಮಾಡುವ ಕೃತ್ಯಗಳು ನಡೆಯುತ್ತಿವೆ. ಶಿಕ್ಷಣ ಸಂಸ್ಥೆಗಳ ಮೇಲೆ ಗೌರ ವವೇ ಇಲ್ಲದಂತಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿ ಪ್ರಾಯವೇ ಸೌಂದರ್ಯ. ಪ್ರಶ್ನೆ ಕೇಳುವುದರಲ್ಲೇ ಜೀವಂತಿಕೆ ಅಡಕವಾಗಿದೆ. ಪರ-ವಿರೋಧದ ಚರ್ಚೆಗಳಿದ್ದಾಗ ಮಾತ್ರ ಹೊಸ ವಿಷಯ ಹುಟ್ಟುತ್ತದೆ. ಆದರೆ ಪ್ರಸ್ತುತ ಪ್ರಶ್ನೆ ಕೇಳುವುದು, ಸಮರ್ಪಕ ಉತ್ತರ ಹುಡುಕುವುದೇ ತಪ್ಪು ಎನ್ನುವಂತಾಗಿದೆ. ಎಲ್ಲೆಡೆ ಭಯದ ವಾತಾರಣದ ನಿರ್ಮಾಣವಾಗಿದೆ ಎಂದು ತಿಳಿಸಿದರು.
ರಂಗಕರ್ಮಿ ಎಸ್.ಆರ್.ರಮೇಶ್ ಮಾತನಾಡಿ, ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಈರುಳ್ಳಿ, ಪೆಟ್ರೋಲ್ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಬೆಲೆ ದಿನೇ ದಿನೆ ಹೆಚ್ಚುತ್ತಿದೆ. ಎಲ್ಲವನ್ನೂ ಒಪ್ಪಿಕೊಂಡು ಜೀವನ ನಡೆಸುವ ಸ್ಥಿತಿಯಿದೆ. ದುರ್ಬಲ ಆರ್ಥಿಕ ನೀತಿ ಯಿಂದಾಗಿ ಮಧ್ಯಮ ವರ್ಗದ ಜನರ ಸ್ಥಿತಿ ಮತ್ತಷ್ಟು ದುಸ್ತರವಾಗಿದೆ. ಪ್ರಶ್ನೆ ಮಾಡಿದರೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಬಳಸುತ್ತಾರೆ. ಇದರ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಿಸಿದರು.
ರಂಗಾಯಣ ಮಾಜಿ ನಿರ್ದೇಶಕ ಜನಾರ್ದನ್(ಜನ್ನಿ), ಅಭಿರುಚಿ ಗಣೇಶ, ಶಾಂತ ರಾಜು, ಶಿವಕುಮಾರ್, ಗೋಪಾಲಕೃಷ್ಣ ಮತ್ತಿತರರು ಸಭೆಯಲ್ಲಿದ್ದರು.