`ಬಡ್ತಿ ಮೀಸಲಾತಿ’ ದಲಿತ ದೌರ್ಜನ್ಯ ತಡೆ ಕಾಯ್ದೆಪರ ಜೂ. 15 ರಂದು ಬೆಂಗಳೂರಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
ಮೈಸೂರು

`ಬಡ್ತಿ ಮೀಸಲಾತಿ’ ದಲಿತ ದೌರ್ಜನ್ಯ ತಡೆ ಕಾಯ್ದೆಪರ ಜೂ. 15 ರಂದು ಬೆಂಗಳೂರಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

June 13, 2018

ಮೈಸೂರು: ಬಡ್ತಿ ಮೀಸಲಾತಿ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂರಕ್ಷಣೆಗೆ ಒತ್ತಾಯಿಸಿ ಜೂ.15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷರೂ ಆದ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ್ತಿ ಮೀಸಲಾತಿ ರದ್ದು ಆಗಿಲ್ಲವಾದರೂ ದಲಿತ ವಿರೋಧಿ ಅಧಿಕಾರಿಗಳು ರದ್ದಾಗಿದೆ ಎಂದು ಬಿಂಬಿಸುತ್ತಿದ್ದಾರೆ. 2002ರ ಬಡ್ತಿ ಮೀಸಲಾತಿ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಕಾಯ್ದೆಗೆ ಇನ್ನು ನಿಯಮ ರಚಿಸಿಲ್ಲ. ಹೀಗಿದ್ದರೂ ಕಾಯ್ದೆ ಜಾರಿ ಯಾಗಿದೆ ಎಂದು ಸಾವಿರಾರು ದಲಿತ ಸಮುದಾಯ ಅಧಿಕಾರಿಗಳಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ವಿರೋಧಿ ಅಧಿಕಾರಿಗಳು ಸುಪ್ರಿಂಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಗಳ ವಿರುದ್ಧವಾಗಿ ನಡೆದುಕೊಂಡಿ ದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿ ಗಳು ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿ 117 ಅನ್ನು ಲೋಕಸಭೆ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ 77ನೇ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಗ್ರೂಪ್ `ಡಿ’ಯಿಂದ ಸರ್ಕಾರದ ಕಾರ್ಯದರ್ಶಿ ಹುದ್ದೆವರೆಗೆ ಬಡ್ತಿ ಮೀಸಲಾತಿ ವಿಸ್ತರಿಸಬೇಕು. ಅಲ್ಲದೆ, ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಷ್ಟ್ರಪತಿಯವರಿಗೆ ತಿಳಿಸಿರುವ ಮಸೂದೆಗೆ ಕೇಂದ್ರ ಸರ್ಕಾರ ರಾಷ್ಟ್ರಪತಿಯವರಿಂದ ಅಂಗೀಕಾರ ನೀಡಲು ಕ್ರಮ ವಹಿಸಬೇಕು. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಬೃಹತ್ ಪ್ರತಿಭಟನಾ ರ್ಯಾಲಿಗೆ ಪ್ರತಿ ಜಿಲ್ಲೆಯಿಂದ 10 ಸಾವಿ ರಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ. ಅದೇ ರೀತಿ ಮೈಸೂರು ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಒಕ್ಕೂಟದ ಜಿಲ್ಲಾ ಸಂಚಾಲಕ ಮಲಿಯೂರು ಸೋಮಯ್ಯ, ಮುಖಂಡ ದ್ಯಾವಪ್ಪನಾಯಕ ಗೋಷ್ಠಿಯಲ್ಲಿದ್ದರು.

Translate »