ಮೈಸೂರಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತ
ಮೈಸೂರು

ಮೈಸೂರಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತ

April 23, 2019

ಮೈಸೂರು: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅಗತ್ಯ ವಸ್ತುಗಳಿಲ್ಲದ ಕಾರಣ ಸೋಮವಾರ ಕಾರ್ಯ ಚಟುವಟಿಕೆ ಸ್ಥಗಿತಗೊಂಡು ಸಾರ್ವಜನಿಕರು ಪರಿತಪಿಸುವಂತಾಗಿತ್ತು.

ಮೈಸೂರು ನಗರದಲ್ಲಿರುವ ಐದು ಕಚೇರಿ ಸೇರಿದಂತೆ ಜಿಲ್ಲೆಯಲ್ಲಿರುವ ಒಟ್ಟು 14 ಉಪ ನೋಂದಣಾಧಿಕಾರಿಗಳ ಕಚೇರಿ ಯಲ್ಲಿ ಪೇಪರ್, ಕಾಟ್ರೇಜ್ ಇನ್ನಿತರ ಅಗತ್ಯ ವಸ್ತುಗಳಿಲ್ಲದೆ ಇಂದು ಬೆಳಿಗ್ಗೆ ಯಿಂದಲೇ ಕಾರ್ಯ ಚಟುವಟಿಕೆ ಸ್ಥಗಿತ ಗೊಂಡಿತ್ತು. ಆಸ್ತಿ ನೋಂದಣಿಗೆ, ಋಣ ಭಾರ ಪ್ರಮಾಣ ಪತ್ರ, ದಾಖಲೆಗಳ ದೃಢೀ ಕೃತ ನಕಲು ಪ್ರತಿಗಾಗಿ ಬಂದ ಸಾರ್ವ ಜನಿಕರು ಪರದಾಡುವಂತಾಗಿತ್ತು. ಅಧಿ ಕಾರಿಗಳು ಹಾಗೂ ಸಿಬ್ಬಂದಿ ಅಸಹಾ ಯಕರಾಗಿ ಕುಳಿತಿದ್ದರು. ಸಬ್ ರಿಜಿಸ್ಟರ್ ಆಫೀಸ್‍ನಲ್ಲಿ ಒಂದು ಪೇಪರ್‍ಗೂ ಗತಿ ಯಿಲ್ಲವೇ ಎಂದು ಕೆಲವರು ಗೊಣಗು ತ್ತಿದ್ದರು. ತುರ್ತಾಗಿ ನೋಂದಣಿ ಮಾಡಿಸ ಲೆಂದು ಬಂದವರು, ತಾವೇ ಪೇಪರ್, ಕಾಟ್ರೆಜ್ ತರುತ್ತೇವೆಂದು ತಿಳಿಸಿದ ಸಂಗತಿಯೂ ಕೆಲವೆಡೆ ನಡೆಯಿತು. ಆದರೆ ಒಬ್ಬರಿಗೆ ನೋಂದಣಿ ಮಾಡಿದರೆ, ಬೇರೆ ಜನರಿಗೆ ಮನವರಿಕೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಸಿಬ್ಬಂದಿ ಕೆಲಸಕ್ಕೆ ಮುಂದಾಗಲಿಲ್ಲ.

ಯಾವುದೇ ಅಗತ್ಯ ವಸ್ತುಗಳು ಇಲ್ಲದ ಕಾರಣ ಕಾರ್ಯ ಸ್ಥಗಿತಗೊಳಿಸಿರುವು ದಾಗಿ ಎಲ್ಲಾ ಉಪ ನೋಂದಣಾಧಿಕಾರಿ ಕಚೇರಿಗಳಿಂದ ಜಿಲ್ಲಾ ನೋಂದಣಾಧಿಕಾ ರಿಗಳಿಗೆ ಪತ್ರ ಬರೆದಿದ್ದರ ಪರಿಣಾಮ, ಮಧ್ಯಾಹ್ನದ ನಂತರ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಲಾಯಿತು. ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಸಾಲವಾಗಿ ಅಗತ್ಯ ವಸ್ತು ಗಳನ್ನು ಕೊಂಡು, ಕಾರ್ಯಾರಂಭ ಮಾಡುವಂತೆ ಮೇಲಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ನೋಂದಣಾಧಿಕಾರಿಗಳು ಆದೇಶಿಸಿದರು. ಪರಿಣಾಮ ಸಂಜೆ 4ರ ನಂತರ ಕೆಲ ಕಚೇರಿಗಳಲ್ಲಿ ಕಾರ್ಯ ಚಟುವಟಿಕೆ ಆರಂಭಗೊಂಡಿತು. ಆದರೆ ತತ್‍ಕ್ಷಣಕ್ಕೆ ಅಗತ್ಯ ವಸ್ತುಗಳ ಪೂರೈಸಲು ಸಾಧ್ಯವಾಗದ ಕಾರಣ ಬಹುತೇಕ ಕಚೇರಿ ಗಳಲ್ಲಿ ದಿನವಿಡೀ ಕಾರ್ಯ ಸ್ಥಗಿತಗೊಂಡಿತ್ತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಎಚ್‍ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಕರಾರು, ಕಳೆದ ಮಾ.31ಕ್ಕೆ ಅಂತ್ಯವಾಗಿ ರುವ ಕಾರಣ, ಪೇಪರ್, ಕಾಟ್ರೇಜ್ ಸರಬ ರಾಜು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಟರ್ ಕರೆಯಲಾಗುತ್ತಿಲ್ಲ, ಹಾಗಾಗಿ ಕಚೇರಿಯ ಇತರೆ ವೆಚ್ಚದಡಿ ಅಗತ್ಯ ವಸ್ತುಗಳನ್ನು ಕೊಳ್ಳಬೇಕೆಂದು ಸೂಚಿಸಲಾಗಿತ್ತು. ಅದರಂತೆ ಕಳೆದ 20 ದಿನಗಳಿಂದ ಎಲ್ಲಾ ಉಪ ನೋಂದಣಾ ಧಿಕಾರಿಗಳ ಕಚೇರಿಯಲ್ಲೂ ಕಾರ್ಯ ನಿರ್ವಹಿಸಲಾಗಿದೆ. ಆದರೆ ಸಮಸ್ಯೆ ಗಂಭೀರವಾದ ಕಾರಣ ಜಿಲ್ಲಾ ನೋಂದ ಣಾಧಿಕಾರಿಗಳ ಮೂಲಕ ಇಲಾಖೆಯ ಗಮನಕ್ಕೆ ತರಲಾಗಿತ್ತು. ಆದರೆ ಸರ್ಕಾರ ಯಾವುದೇ ಪರ್ಯಾಯ ಕ್ರಮ ಕೈಗೊ ಳ್ಳದ ಕಾರಣ ಇಂದು ಅನಿವಾರ್ಯವಾಗಿ ಕಾರ್ಯ ಸ್ಥಗಿತಗೊಳಿಸಲಾಗಿತ್ತು.

ಶಾಶ್ವತ ಪರಿಹಾರ ಬೇಕು: ಇಲಾಖೆ ಸೂಚನೆಯಂತೆ ಜನತಾ ಬಜಾರ್‍ನಿಂದ ಕ್ರೆಡಿಟ್ ಬಿಲ್ ಮೂಲಕ ಅಗತ್ಯ ವಸ್ತು ಗಳನ್ನು ಪೂರೈಕೆ ಮಾಡಿಕೊಳ್ಳುತ್ತಿದ್ದು, ನಾಳೆ(ಏ.23)ಯಿಂದ ಎಂದಿನಂತೆ ಕಾರ್ಯ ಚಟುವಟಿಕೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ. ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗೂ ಬೇಡಿಕೆ ಇರುವಷ್ಟು ವಸ್ತುಗಳನ್ನು ಏಕ ಕಾಲದಲ್ಲಿ ಒದಗಿಸಲು ಕಷ್ಟಸಾಧ್ಯ. ಕಾಟ್ರೆಜ್ ಇನ್ನಿತರೆ ವಸ್ತುಗಳ ಸರಬರಾಜು 2-3 ದಿನ ತಡವಾಗಬಹುದು. ಅಗತ್ಯ ವಸ್ತುಗಳನ್ನು ಒದಗಿಸಿದರೂ, ಕಂಪ್ಯೂ ಟರ್, ಪ್ರಿಂಟರ್ ನಿರ್ವಹಣೆ ಸಮಸ್ಯೆ ಬಿಗಡಾಯಿಸಬಹುದು. ಹೆಚ್‍ಸಿಎಲ್ ಸಂಸ್ಥೆ ಮೂಲಕವೇ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ಸ್ ವೇತನಕ್ಕೆ ಆಗ್ರಹಿಸ ಬಹುದು. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಸರ್ಕಾರ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ. ನಿರ್ಲಕ್ಷ್ಯ ವಹಿಸಿದರೆ ಉಪ ನೋಂದಣಾ ಧಿಕಾರಿಗಳು ಅವ್ಯವಸ್ಥೆಯ ಗೂಡಾಗಿ, ಸಾರ್ವಜನಿ ಕರಿಗೆ ತೀವ್ರ ತೊಂದರೆಯಾಗುವುದು ಖಚಿತ.

ಸಿಬ್ಬಂದಿ ಮನವಿ: ಹೆಚ್‍ಸಿಎಲ್ ಸಂಸ್ಥೆ ಮೂಲಕ ಗುತ್ತಿಗೆ ಆಧಾರದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಡಾಟಾ ಎಂಟ್ರಿ ಆಪರೇಟರ್ಸ್‍ಗೆ 2 ತಿಂಗಳಿಂದ ವೇತನ ನೀಡಿಲ್ಲ ಎನ್ನಲಾಗುತ್ತಿದೆ. ಸಾರ್ವಜನಿ ಕರಿಗೆ ತೊಂದರೆಯಾಗಬಾರದು ಎಂಬ ಕಾರಣ ಹಾಗೂ ಅಧಿಕಾರಿಗಳ ಒತ್ತಾಯಕ್ಕೆ ಮಣಿದು ಇಂದಿಗೂ ಕೆಲಸ ಮಾಡುತ್ತಿ ದ್ದಾರೆ. ಹೆಚ್‍ಸಿಎಲ್ ಸಂಸ್ಥೆಯೊಂದಿಗಿನ ಕರಾರು ಮುಗಿದಿರುವ ಕಾರಣ, ಮುಂದೆ ವೇತನ ನೀಡುವವರ್ಯಾರು ಎಂಬ ಗೊಂದಲ ಎದುರಾಗಿದೆ. ಹೊಸದಾಗಿ ಟೆಂಡರ್ ಪಡೆದವರು ಈಗಿರುವ ಡಾಟಾ ಎಂಟ್ರಿ ಆಪರೇಟರ್ಸ್‍ಗಳನ್ನೇ ಮುಂದುವರೆಸು ತ್ತಾರೋ? ಇಲ್ಲವೋ? ಎಂಬ ಅನು ಮಾನ ಹುಟ್ಟಿದೆ. ಹಾಗಾಗಿ ನಾಳೆ(ಏ.23) ಜಿಲ್ಲಾ ನೋಂದಣಾಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಸಮಸ್ಯೆ ಹೇಳಿಕೊಳ್ಳ ಲಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Translate »