ಕೊಲೆ ಆರೋಪ ಸಾಬೀತು: ಅಪರಾಧಿಗೆ ಶಿಕ್ಷೆ
ಕೊಡಗು

ಕೊಲೆ ಆರೋಪ ಸಾಬೀತು: ಅಪರಾಧಿಗೆ ಶಿಕ್ಷೆ

March 4, 2019

ಮಡಿಕೇರಿ: ಕೊಲೆ ಪ್ರಕರಣ ಸಾಬೀತಾದ ಹಿನ್ನಲೆ ಯಲ್ಲಿ ಆರೋಪಿಗೆ ವಿರಾಜಪೇಟೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಕಾಫಿ ತೋಟದ ಲೈನ್ ಮನೆಯೊಂದರಲ್ಲಿ ವಾಸವಿದ್ದ ಪಣಿ ಎರವರ ಚುಂಡೆ ಎಂಬಾಕೆಯೇ ಶಿಕ್ಷೆಗೆ ಒಳಗಾದ ಅಪರಾಧಿ.

ಪ್ರಕರಣ ಹಿನ್ನಲೆ: ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಕಾಫಿ ತೋಟ ಒಂದರಲ್ಲಿ ಚುಂಡೆ ತನ್ನ ಮಗಳಾದ ಶೋಭಾ ಎಂಬಾಕೆಯೊಂದಿಗೆ ವಾಸವಿದ್ದಳು. ಈ ನಡುವೆ ಗೌರಿ ಅಲಿಯಾಸ್ ಪಾಲಿ ಎಂಬಾಕೆ ತನ್ನ ಮಗುವಿನೊಂದಿಗೆ ಶೋಭಾ ಅವರ ಮನೆಗೆ ಬಂದು ಅಲ್ಲಿ ವಾಸವಿದ್ದಳು. ಚುಂಡೆಗೆ ತೋಟದ ಮಾಲೀಕ ರೋರ್ವರು ಮನೆ ಕೆಲಸಕ್ಕೆ ಕೆಲಸದಾಕೆಯನ್ನು ಮಾಡಿ ಕೊಡು ವಂತೆ ತಿಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ 2018ರ ಫೆಬ್ರವರಿ 26ರಂದು ರಾತ್ರಿ ಚುಂಡೆ ಮತ್ತು ಗೌರಿ ಅಲಿಯಾಸ್ ಪಾಲಿ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿತ್ತು. ಮತ್ತೆ ಮರುದಿನ ಫೆ.27ರಂದು ಇದೇ ವಿಚಾರವಾಗಿ ಗೌರಿ ಮತ್ತು ಚುಂಡೆ ನಡುವೆ ಜಗಳವಾದಾಗ ಶೋಭಾ ಮಧ್ಯೆ ಪ್ರವೇಶಿಸಿ, ಜಗಳ ಬಿಡಿಸಿ ಬಳಿಕ ತನ್ನ ಅಣ್ಣ ರವಿ ಎಂಬಾತನ ಮನೆಗೆ ತೆರಳಿದ್ದಳು.

ಅದೇ ದಿನ ಸಂಜೆ 4 ಗಂಟೆಯ ಸಮಯದಲ್ಲಿ ಶೋಭಾ ಮನೆಗೆ ಹಿಂದಿರುಗಿದಾಗ ಗೌರಿ ಮನೆಯ ಜಗುಲಿಯಲ್ಲಿ ಮಂಡಿಕಾಲೂರಿ, ಗೋಡೆಗೆ ಒರಗಿಕೊಂಡಂತೆ ಕೂತಿರುವುದು ಕಂಡಿದೆ. ಬಳಿಕ ಹತ್ತಿರ ತೆರಳಿ ಗೌರಿಯನ್ನು ಮುಟ್ಟಿ ನೋಡಿದಾಗ ಆಕೆ ಮೃತಪಟ್ಟಿರುವುದು ಕಂಡು ಬಂದಿದೆ. ಮಾತ್ರವಲ್ಲದೇ ಗೌರಿಯ ಕುತ್ತಿಗೆ ಬಿಗಿದ ಸ್ಥಿತಿಯಲ್ಲಿ ಗಾಯವಾಗಿರುವುದು ಗೋಚರಿಸಿದೆ. ಶೋಭಾ ತನ್ನ ತಾಯಿ ಚುಂಡೆಯನ್ನು ಹುಡುಕಿದಾಗ ಚುಂಡೆ ಮನೆಯ ಒಳಗಿನಿಂದ ಬಾಗಿಲು ಹಾಕಿಕೊಂಡು ಅವಿತುಕೊಂಡಿದ್ದಳು.

ಈ ಕುರಿತು ಶೋಭಾ ಗೋಣಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಅಂದಿನ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಮೊ.ಸಂಖ್ಯೆ 7/2018ರ ಕಲಂ 302 ಐ.ಪಿ.ಸಿ. ಸೆಕ್ಷನ್ ಅಡಿಯಲ್ಲಿ ಚುಂಡೆಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ತದನಂತರ ಪ್ರಕರಣವನ್ನು ತನಿಖೆ ನಡೆಸಿದ ವೃತ್ತನಿರೀಕ್ಷಕ ಕೆ.ಎಂ. ವಸಂತ, ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶರಾದ ರಮಾ ಅವರು, ಅಪರಾಧ ಎಸಗಿರುವುದು ಸಾಬೀ ತಾದ ಹಿನ್ನಲೆಯಲ್ಲಿ ಕಲಂ 304(2) ಐ.ಪಿ.ಸಿ. ಸೆಕ್ಷನ್ ಅನ್ವಯ 7 ವರ್ಷ ಸಾದಾ ಸಜೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ವಾದ ಮಂಡಿಸಿದರು.

Translate »