ಹೊಳೆನರಸೀಪುರದಲ್ಲಿ ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಹಾಸನ

ಹೊಳೆನರಸೀಪುರದಲ್ಲಿ ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

September 21, 2018

ಅರಸೀಕೆರೆ:  ಜಿಲ್ಲೆಯ ಹೊಳೆನರಸೀಪುರ ವಕೀಲ ಅವಿನಾಶ್ ಅವರ ಮೇಲೆ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂಬಂಧ ಕೂಡಲೇ ಕ್ರಮವಹಿಸಬೇಕು. ನಿರ್ವಾಹಕನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ವಕೀಲರು ಸಭೆ ನಡೆಸಿ ಪ್ರತಿಭಟಿಸಿದರು.

ನಗರದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಲೋಕೇಶ್ ಕುಮಾರ್ ಅವರು ಮಾತನಾಡಿ, ಹೊಳೆನರಸೀಪುರ ವಕೀಲ ಅವಿನಾಶ್ ಎಂಬುವವರ ಮೇಲೆ ಸರ್ಕಾರಿ ಬಸ್ ನಿರ್ವಾಹಕ ತಮ್ಮಣ್ಣ ಅವರು ಹಲ್ಲೆ ಮಾಡಿದ್ದು ಇದು ನ್ಯಾಯಾಂಗಕ್ಕೆ ಮಾಡಿದ ನಿಂದನೆಯಾಗಿದೆ. ಪ್ರಜಾವ್ಯವಸ್ಥೆಯ 3ನೇ ಅಂಗವಾಗಿರುವ ನ್ಯಾಯಾಂಗದಲ್ಲಿ ಕಾನೂನು ರಕ್ಷಣೆ ಮಾಡುವ ನಮಗೇ ಹೀಗಾದರೇ ಜನಸಾಮಾನ್ಯರ ಗತಿ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದ ಅನೇಕ ಕಡೆ ಪದೇ ಪದೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಸರ್ಕಾರ ಸೇರಿದಂತೆ ಪೊಲೀಸರು ಕೂಡಲೇ ಗಮನ ಹರಿಸಿ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ಎನ್.ಎಸ್.ಸುಬ್ಬಣ್ಣ, ವಕೀಲರ ಸಂಘದ ಕಾರ್ಯದರ್ಶಿ ಗೀತಾ, ವಕೀಲರಾದ ಕೆ.ವಿ.ಹಿರಿಯಣ್ಣ, ಯತೀಶ್, ಸಿದ್ದೇಶ್, ರವಿಶಂಕರ್, ವಿಜಯಕುಮಾರ್, ಶ್ವೇತಾ, ರವಿ, ಸರ್ವೇಶ್ ಇದ್ದರು.

Translate »