ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು :  ಸಂಸದ ಪ್ರತಾಪ್ ಸಿಂಹ
ಕೊಡಗು

ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು : ಸಂಸದ ಪ್ರತಾಪ್ ಸಿಂಹ

June 20, 2018

ಗೋಣಿಕೊಪ್ಪಲು:  ಕೊಡಗಿನ ಶಾಸಕರುಗಳು, ಸಂಸದರರು ಹಾಗೂ ಜನರ ವಿರೋಧದ ನಡುವೆ ದಕ್ಷಿಣ ಕೊಡಗು ಮೂಲಕ ಕೇರಳಕ್ಕೆ ಸಂಪ ರ್ಕಿಸಲು ಉದ್ದೇಶಿಸಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ದ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪರಿಮಳ ಮಂಗಳ ವಿಹಾರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಲಚೇರಿ ರೈಲ್ವೆ ಮಾರ್ಗಕ್ಕೆ ಕೊಡಗಿನಲ್ಲಿ ಕೇರಳದ ಕೆಆರ್‍ಡಿಸಿಎಲ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿಯಿಂದ ಅನುಮತಿ ಪಡೆದು ಸರ್ವೇ ನಡೆಸಲಾಗುತ್ತಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿಯೇ ಅನುಮತಿ ಪಡೆಯಲಾಗಿದೆ. ಇದಕ್ಕೆ ನಾನು ಸೇರಿದಂತೆ ಕೊಡಗಿನ ಶಾಸಕರುಗಳ ವಿರೋಧವಿದೆ. ಮುಂದೆ ಸರ್ವೆ ಕಾರ್ಯಕ್ಕೆ ಬರುವ ಸಂದರ್ಭ ಅವರನ್ನು ಓಡಿಸುವ ಕೆಲಸವಾಗಬೇಕಿದೆ ಎಂದರು.

2012ರಲ್ಲಿ ಯುಪಿಎ ಸರ್ಕಾರ ಆಡಳಿತವಿದ್ದಾಗ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆ ಮಾಡಲಾಗಿತ್ತು. ಇದನ್ನು ರಾಜ್ಯ ಸರ್ಕಾರದ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿರುವುದಕ್ಕೆ ನಾವು ಬಿಡುವುದಿಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಕೊಡಗಿನ ಶಾಸಕರನ್ನು ಸೇರಿಸಿಕೊಂಡು ಭೇಟಿ ಮಾಡಲಾಗುವುದು. ಈ ಸಂದರ್ಭ ಮುಖ್ಯ ಕಾರ್ಯದರ್ಶಿ ಮೂಲಕ ನೀಡಿರುವ ಅನುಮತಿಯನ್ನು ಹಿಂಪಡೆಯು ವಂತೆ ಒತ್ತಾಯಿಸಲಾಗುವುದು. ಇದರಂತೆ ಪ್ರತಿಭಟನೆ ನಡೆಸಲು ಸಿದ್ದರಿದ್ದೇವೆ ಎಂದರು. ಕೇಂದ್ರ ಸರ್ಕಾರ ಕೊಡಗಿನ ಕುಶಾಲ ನಗರದವರೆಗೆ ಬರುವ ರೈಲ್ವೆ ಯೋಜನೆಗೆ ಅನುಮತಿ ನೀಡಿದೆ. ತಲಚೇರಿ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮೂಲಕ ತಡೆಯಲಾಗುವುದು ಎಂದರು.

ಪರಿಸರ ಪ್ರೇಮಿ ಎಂದು ಎಲ್ಲಾ ಯೋಜನೆಗಳಿಗೂ ವಿರೋಧ ವ್ಯಕ್ತಪಡಿಸುವ ಕರ್ನಲ್ ಮುತ್ತಣ್ಣ ಅವರ ತೋಟದಲ್ಲಿ ಎಷ್ಟು ಮರಗಳಿವೆ ಎಂದು ನೋಡ ಬೇಕಿದೆ. ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಹೇಳುವ ಇವರು ಎಷ್ಟು ಮರಗಳನ್ನು ಬೆಳೆಸಿದ್ದಾರೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಗೆಲುವು ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧಿಸಿದವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಈ ಬಾರಿ ನಡೆದ ವಿಧಾನಸಭಾ ಚುನಾವನೆಯಲ್ಲಿ ಮಾಡು ಇಲ್ಲವೆ ಮಡಿ ಎಂದು ಹೋರಾಟ ನಡೆಸಿ ಗೆಲುವು ಪಡೆದಿದ್ದೇವೆ ಎಂದರು.

ಮುಖಂಡ ಬೋಸ್ ದೇವಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಎಂಎಲ್‍ಸಿ ಸುನಿಲ್ ಸುಬ್ರಮಣ ಮಾತನಾಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ವಿರಾಜಪೇಟೆ ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಪ್ರಮುಖರುಗಳಾದ ಮನುಮುತ್ತಪ್ಪ, ರೀನಾ ಪ್ರಕಾಶ್, ಯಮುನಾ ಚೆಂಗಪ್ಪ, ಕಾಂತಿ ಸತೀಶ್, ಲಾಲಾ ಭೀಮಯ್ಯ ಪಾಲ್ಗೊಂಡಿದ್ದರು. ವಿವಿಧ ಭಾಗಗಳ ಕಾರ್ಯಕರ್ತರು ಭಾಗವಹಿಸಿದ್ದರು.

Translate »