ಎಲ್‍ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ
ಮೈಸೂರು

ಎಲ್‍ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ

February 17, 2020

ಮೈಸೂರು, ಫೆ.16(ಆರ್‍ಕೆಬಿ)- ಜನಸಾಮಾನ್ಯರು ಬಳಸುವ ಎಲ್‍ಪಿಜಿ ದರವನ್ನು ಏಕಾಏಕಿ 150 ರೂ.ಗಳಷ್ಟು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಭಾನುವಾರ ಮೈಸೂರಿನ ಆರ್‍ಟಿಓ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತಿ ಅಗತ್ಯವಾದ ಎಲ್‍ಪಿಸಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಲೇ ಬಂದಿದೆ. ಕಳೆದ ತಿಂಗಳಷ್ಟೆ 150 ರೂ. ಏರಿಕೆ ಮಾಡಿದ್ದ ಸರ್ಕಾರ, ಇದೀಗ ಮತ್ತೆ ತಿಂಗಳ ಅವಧಿಯಲ್ಲಿ ಮತ್ತೆ 150 ರೂ.ಗಳಷ್ಟು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ನೋಟ್ ಬ್ಯಾನ್, ಜಿಎಸ್‍ಟಿ, ರೇರಾ ಕಾಯ್ದೆಯಿಂದ ತತ್ತರಿಸಿರುವ ದೇಶದ ಜನರ ಸಾಮಾನ್ಯ ಜೀವನ ಮಟ್ಟ ಪ್ರಪಾತಕ್ಕೆ ಹೋಗಿದ್ದು, ಜೀವನ ನಡೆಸುವುದೇ ದುಸ್ತರ ಎಂಬಂತಾಗಿದೆ. ಇಂತಹ ಸಮಯದಲ್ಲಿ ಪದೇ ಪದೆ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಜನರಿಗೆ ಮತ್ತಷ್ಟು ಹೊರೆಯಾಗಿದೆ. ಮಾತೆತ್ತಿದರೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ, ಬಡವರ ಪರ ಯೋಜನೆಗಳನ್ನು ರೂಪಿಸಿದೆ ಕೇವಲ ಉದ್ಯಮಿಗಳ ಪರವಾಗಿದ್ದಾರೆ ಎಂದು ಟೀಕಿಸಿದರು. ಕೂಡಲೇ ಹೆಚ್ಚಿಸಿರುವ ಎಲ್‍ಪಿಜಿ ಗ್ಯಾಸ್ ದರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾ ಯಿಸಿದರು. ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಡಾ.ಶಾಂತರಾಜೇ ಅರಸ್, ಪಿ.ಶಾಂತಮೂರ್ತಿ, ವಿಜಯೇಂದ್ರ, ಅಕ್ಷಯ್, ರಾಜೇಶ್, ಪ್ರಭುಶಂಕರ್, ಗಿರೀಶ್‍ಗೌಡ, ಮೊಗಣ್ಣಾಚಾರ್, ಬಂಗಾರಪ್ಪ, ಪರಿಸರ ಚಂದ್ರು, ಗುರುಮಲ್ಲಪ್ಪ, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.

Translate »