ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ
ಮಂಡ್ಯ

ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ

February 13, 2019

ಮಂಡ್ಯ: ವಿಕಲಚೇತನರನ್ನು ನಿರ್ಲಕ್ಷ್ಯ ಮಾಡಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿಕಲ ಚೇತನರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ, ಮಂಡ್ಯ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ ನಗರದ ಸರ್‍ಎಂವಿ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಕುಮಾರ್ ಮಾತನಾಡಿ, ವಿಕಲಚೇತನರು ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದು, ಹಲವು ಸಂಕಷ್ಠಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಅಂಗವಿಕಲ ರಿಗೆ ಸಮರ್ಪಕ ಯೋಜನೆ ರೂಪಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಅಂಗವಿಕಲರ ಘನತೆ ಹಾಗೂ ಗೌರವ ಬದುಕಿಗೆ ಮಾಸಿಕ 5 ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸುವ ಪ್ರತಿ ಬಜೆಟ್‍ನಲ್ಲೂ ಅಂಗವಿಕಲರಿಗೆ ಉದ್ಯೋಗ ನೀಡಲು ಆದ್ಯತೆ ನೀಡದೆ ಸಮಾಧಾನ ಪಡಿಸಲು ನಾಲ್ಕೈದು ವರ್ಷಕೊಮ್ಮೆ 50ರಿಂದ 100 ರೂ. ಮಾಸಾಶನ ಏರಿಕೆ ಮಾಡಿ ಮೂಗಿಗೆ ತಪ್ಪ ಸವರುವ ಕೆಲಸ ಮಾಡುತ್ತಿವೆ. ಅಂಗವಿಕಲರು ಸಮಾಜದಲ್ಲಿ ಗೌರವದಿಂದ ಬದುಕಲು ಉದ್ಯೋಗ ಬಯಸುತ್ತಿದ್ದಾರೆಯೇ ಹೊರತು, ಮಾಸಾಶನ ಬಯಸುತ್ತಿಲ್ಲ. ಆದರೆ ಉದ್ಯೋಗ ಸಿಗುವವರೆಗೆ ಜೀವನ ನಿರ್ವಹಣೆಗಾಗಿ ಮಾಸಾಶನ ಅತ್ಯಗತ್ಯವಾಗಿದ್ದು, ಕೂಡಲೇ 5ಸಾವಿರ ರೂ. ಮಾಸಾಶನ ನೀಡುವಂತೆ ಆಗ್ರಹಿಸಿದರು.

ವಿಕಲಚೇತನರನ್ನು ಅನುಕಂಪದಿಂದ ನೋಡುವುದನ್ನು ಬಿಟ್ಟು ಅವರ ಜೀವನ ಉತ್ತಮ ಪಡಿಸಲು ಸರ್ಕಾರಗಳು ಮುಂದಾಗಬೇಕು. ಕುಟುಂಬ ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಅಂಗವಿಕಲರ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಯೋಜನೆಗಳನ್ನು ಜಾರಿಗೆ ತರಬೇಕು. ಸಮಾಜದಲ್ಲಿ ಅತ್ಯಂತ ನಿಕೃಷ್ಠಕ್ಕೊಳಗಾಗಿರುವ ಎಲ್ಲ ಸ್ವರೂಪದ ಅಂಗವಿಕಲರು ಏರುತ್ತಿರುವ ಬೆಲೆ ಏರಿಕೆ ಯಿಂದ ತತ್ತರಿಸಿದ್ದಾರೆ. ಬರುವ 1400 ರೂ. ಮಾಸಾಶನ ದಿಂದ ಜೀವನ ಸಾಗಿಸುವುದು ಕಷ್ಟವಾಗಿದ್ದು, ಮುಂದಾ ದರೂ ಸರ್ಕಾರಗಳು ನಮ್ಮ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹಾಗೂ ಪಾಲಕರ ಒಕ್ಕೂಟದ ಉಪಾಧ್ಯಕ್ಷ ದೊಡ್ಡಮರಿಗೌಡ, ಗಿರಿಗೌಡ, ಸಿ.ಕುಮಾರಿ, ಜಿಲ್ಲಾ ಕಿವುಡರಸಂಘದ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷ ಲಿಂಗರಾಜು,ಕಾರ್ಯದರ್ಶಿ ಕುಮಾರ್, ಮಂಜು ನಾಥ್, ನಂದೀಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »