ಕಲುಷಿತ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ
ಹಾಸನ

ಕಲುಷಿತ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ

May 27, 2019

ಬೇಲೂರು: ಜಮೀನು ಹಾಗೂ ಮನೆಯ ಸಮೀಪವೇ ಹರಿಯುತ್ತಿರುವ ಒಳಚರಂಡಿ ನೀರು ತಪ್ಪಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಚನ್ನಕೇಶವ ದೇಗುಲದ ಹಿಂಭಾಗದ ನಾಗರಿಕರು ಪ್ರತಿಭಟನೆ ನಡೆಸಿದರು.

ಇಲ್ಲಿನ ಪುರಸಭೆ ಮುಂಭಾಗ ಸಮಾವೇಶಗೊಂಡ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಲೋಹಿತ್ ಮಾತನಾಡಿ, ಪುರಸಭೆ ವ್ಯಾಪ್ತಿಯ 12 ಹಾಗೂ 13ನೇ ವಾರ್ಡಿನ ಒಳ ಚರಂಡಿ ನೀರು ಮೂಡಿಗೆರೆ ರಸ್ತೆಯಲ್ಲಿನ ಚರಂಡಿ ಮೂಲಕ ಈ ಭಾಗ ದಲ್ಲಿರುವ ಮನೆಗಳ ಹಾಗೂ ಜಮೀನುಗಳಿಗೆ ನುಗ್ಗಿ ಜಮೀನಿನಲ್ಲಿ ಬೆಳೆದಿದ್ದ ತರಕಾರಿ, ಸೊಪ್ಪು ಹಾಗೂ ದನಗಳಿಗಾಗಿ ಬೆಳೆದಿದ್ದ ಮೇವೆಲ್ಲ ಕೊಳಚೆ ನೀರಿನಲ್ಲಿ ಕರಗಿ ನಾಶ ವಾಗುತ್ತಿದೆ. ಈ ಭಾಗದಲ್ಲಿ ಕೊಳಚೆ ನೀರು ನಿಲ್ಲುತ್ತಿರುವುದರಿಂದ ನಾಗರಿಕರಲ್ಲಿ ಸಾಂಕ್ರಾ ಮಿಕ ಕಾಯಿಲೆ ಹರಡುವ ಭೀತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳು ಹಾಗೂ ತಾಲೂಕು ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಈ ಭಾಗದ ಜನರೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತ್ತೊಬ್ಬ ನಿವಾಸಿ ಜಯಶೀಲ ಮಾತನಾಡಿ, ಈ ಭಾಗದಲ್ಲಿ ಸರಿಯಾಗಿ ನೀರು ಹರಿಯಲು ಚರಂಡಿ ಮಾಡದಿರುವುದರಿಂದ ಒಳ ಚರಂಡಿ ನೀರೆಲ್ಲ ಇಲ್ಲೆ ನಿಲ್ಲುತ್ತಿದೆ. ಇಲ್ಲಿ ನಿಂತಿರುವ ನೀರಿನಿಂದ ವಾಸನೆಯೊಂದಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿ ದ್ದೇವೆ. ಅಲ್ಲದೆ ಇಲ್ಲಿನ ನೀರನ್ನು ದಾಟುವ ವೇಳೆ ಕೆಲ ವೃದ್ಧರು ಕೆಳಗೆ ಬಿದ್ದು ಗಾಯ ಮಾಡಿಕೊಂಡಿ ದ್ದಾರೆ. ಜಾನುವಾರುಗಳು ಸಹ ಇದೇ ನೀರನ್ನು ಕುಡಿದು ಸಾವನ್ನಪ್ಪುತ್ತಿವೆ. ಇದರ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ತಕ್ಷಣವೆ ಇಲ್ಲಿನ ಸಮಸ್ಯೆ ಬಗೆಹರಿಸಿ ನಮಗೆ ನೆಮ್ಮದಿಯಿಂದ ಜೀವನ ನಡೆಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸ್ಥಳೀಯರಾದ ದುರ್ಗಮ್ಮ, ಕೃಷ್ಣೇಗೌಡ, ರವಿ, ಶಶಿಕುಮಾರ್, ಯತೀಶ್, ಗಜೇಂದ್ರ ಸೇರಿದಂತೆ ಇನ್ನಿತರರಿದ್ದರು.