ಜೆಡಿಎಸ್ ಕೋಟೆಯಲ್ಲಿ ಚಿಗುರುತ್ತಿದೆ ಕಮಲ..!
ಹಾಸನ

ಜೆಡಿಎಸ್ ಕೋಟೆಯಲ್ಲಿ ಚಿಗುರುತ್ತಿದೆ ಕಮಲ..!

May 27, 2019

ಲೋಕಸಭಾ ಚುನಾವಣೆಯ ಮತಗಳಿಕೆಯಲ್ಲಿ ಸುಧಾರಣೆ, ಮೊದಲ ಬಾರಿಗೆ 5 ಲಕ್ಷ ಮತ ಪಡೆದ ಬಿಜೆಪಿ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ದೋಸ್ತಿ ಸರ್ಕಾರಕ್ಕೆ ತೀವ್ರ ಪೈಪೋಟಿ ನೀಡಿ 2ನೇ ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಂಡಿದೆ. ಆದರೆ, ಈವರೆಗಿನ ಎಲ್ಲಾ ಚುನಾವಣೆ ಗಳಲ್ಲಿಯೂ ಮೂರನೇ ಸ್ಥಾನಕ್ಕೆ ಪಡೆ ಯುತ್ತಿದ್ದ ಬಿಜೆಪಿ ಇದೇ ಮೊದಲ ಬಾರಿಗೆ 5 ಲಕ್ಷ ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದೆ.

2014ರ ಲೋಕಸಭೆ ಹಾಗೂ 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಗಣನೀಯ ಏರಿಕೆ ಕಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಅನುಪಸ್ಥಿತಿಯ ಲಾಭ ಜೆಡಿಎಸ್ ಬದಲಿಗೆ ಬಿಜೆಪಿ ಪಾಲಾಗಿರು ವುದು ಫಲಿತಾಂಶದಿಂದ ವೇದ್ಯವಾಗುತ್ತಿದೆ.

2014ರಲ್ಲಿ ಶೇ. 16ರಷ್ಟಿದ್ದ ಬಿಜೆಪಿ ಮತ ಗಳಿಕೆ ಪ್ರಮಾಣ ಈ ಬಾರಿ ಶೇ. 46ಕ್ಕೆ ಏರಿದೆ. ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಈ ಬಾರಿ ಅಚ್ಚರಿ ಮೂಡಿಸುವ ಪ್ರಮಾಣದಲ್ಲಿ ಮತ ಗಳಿಸಿದೆ.

ಒಂದೇ ವರ್ಷದಲ್ಲಿ ಮತಗಳಿಕೆಯಲ್ಲಿ ಚೇತರಿಕೆ: 2018ರ ವಿಧಾನಸಭೆ ಚುನಾ ವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಕೆ.ಎಂ.ಶಿವಲಿಂಗೇ ಗೌಡ 93,986, ಕಾಂಗ್ರೆಸ್‍ನ ಜಿ.ಬಿ.ಶಶಿ ಧರ್ 50,397 ಹಾಗೂ ಬಿಜೆಪಿಯ ಜಿ. ಮರಿಸ್ವಾಮಿ 25,258 ಮತ ಗಳಿಸಿದ್ದರು. 2019ರ ಲೋಕಸಭಾ ಚುನಾ ವಣೆಯಲ್ಲಿ ಜೆಡಿಎಸ್ 85,195 ಮತ್ತು ಬಿಜೆಪಿ 74,765 ಗಳಿಸುವ ಮೂಲಕ ಜೆಡಿಎಸ್ 10,430 ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಒಂದು ವರ್ಷದ ಅವಧಿಯಲ್ಲಿ 49,507 ಹೆಚ್ಚುವರಿ ಮತ ಸೆಳೆದಿದೆ.

ಅರಕಲಗೂಡು ವಿಧಾನಸಭೆಯಲ್ಲಿ ಜೆಡಿಎಸ್‍ನ ಎ.ಟಿ.ರಾಮಸ್ವಾಮಿ 85064, ಕಾಂಗ್ರೆಸ್‍ನ ಎ.ಮಂಜು 74,411 ಹಾಗೂ ಬಿಜೆಪಿಯ ಯೋಗಾರಮೇಶ್ 22,679 ಮತ ಪಡೆದಿದ್ದರು. ಈ ಬಾರಿ ಲೋಸಭಾ ಚುನಾವಣೆಯಲ್ಲಿ ಜೆಡಿಎಸ್ 80,812, ಬಿಜೆಪಿ 79,116 ಮತ ಪಡೆದಿದ್ದು ಜೆಡಿ ಎಸ್ 1,696 ಮತಗಳ ಅಲ್ಪ ಮುನ್ನಡೆ ಪಡೆ ದಿದೆ. ಇಲ್ಲಿಯೂ ಬಿಜೆಪಿ 56,437 ಹೆಚ್ಚು ವರಿ ಮತಗಳನ್ನು ತನ್ನದಾಗಿಸಿಕೊಂಡಿದೆ.

ಶ್ರವಣಬೆಳಗೊಳ ವಿಧಾನಸಭೆಯಲ್ಲಿ ಜೆಡಿ ಎಸ್‍ನ ಸಿ.ಎನ್.ಬಾಲಕೃಷ್ಣ 1,05,516 ಮತ ಪಡೆದರೆ, ಕಾಂಗ್ರೆಸ್‍ನ ಸಿ.ಎಸ್. ಪುಟ್ಟೇ ಗೌಡ 52,504 ಹಾಗೂ ಬಿಜೆಪಿಯ ಶಿವ ನಂಜೇಗೌಡ 7,506 ಮತ ಗಳಿಸಿದ್ದರು. ಲೋಕ ಸಭೆ ಚುನಾವಣೆಯಲ್ಲಿ ಜೆಡಿಎಸ್ 94,299 ಹಾಗೂ ಬಿಜೆಪಿ 55,144 ಮತ ಪಡೆದಿದ್ದು ಜೆಡಿಎಸ್ 39,155 ಮುನ್ನಡೆ ಸಾಧಿಸಿದೆ. ಕಳೆದ ವರ್ಷ 7 ಸಾವಿರ ಗಡಿ ದಾಟಲು ಪರ ದಾಡುತ್ತಿದ್ದ ಬಿಜೆಪಿ ಲೋಕಸಭಾ ಚುನಾವಣೆ ಯಲ್ಲಿ 47,638 ಹೆಚ್ಚುವರಿ ಮತ ಪಡೆದಿದೆ.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರನ್ನು ಹೊಂದಿ ರುವ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಮತ ಗಳಿಕೆ ಅಲ್ಪ ಏರಿಕೆಯಾಗಿದ್ದರೂ ಒಟ್ಟಾರೆ ಹಿನ್ನಡೆಯಾಗಿದೆ. ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿಯ ಪ್ರೀತಂ ಜೆ.ಗೌಡ 63,345, ಜೆಡಿಎಸ್‍ನ ಹೆಚ್.ಎಸ್.ಪ್ರಕಾಶ್ 50,342 ಹಾಗೂ ಕಾಂಗ್ರೆಸ್‍ನ ಹೆಚ್.ಕೆ. ಮಹೇಶ್ 38,101 ಮತ ಗಳಿಸಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ 80,551, ಬಿಜೆಪಿ 65,586 ಮತ ಪಡೆದಿದ್ದು ಜೆಡಿ ಎಸ್‍ಗೆ 14965 ಮುನ್ನಡೆ ದೊರೆತಿದೆ. ಇಲ್ಲಿ ಬಿಜೆಪಿ 2,241 ಮತಗಳನ್ನು ಕಳೆದ ವಿಧಾನ ಸಭಾ ಚುನಾವಣೆಗಿಂತ ಹೆಚ್ಚು ಪಡೆದಿದೆ.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಕೆ.ಎಸ್.ಲಿಂಗೇಶ್ 64,268, ಬಿಜೆಪಿಯ ಹೆಚ್.ಕೆ.ಸುರೇಶ್ 44,578 ಹಾಗೂ ಕಾಂಗ್ರೆಸ್‍ನ ಕೀರ್ತನ ರುದ್ರೇಶ್ ಗೌಡ 39,519 ಮತಗಳಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 71,220 ಹಾಗೂ ಬಿಜೆಪಿ 64,055 ಮತ ಗಳಿಸಿದೆ. ಇಲ್ಲಿ ಜೆಡಿಎಸ್ 7,165 ಮುನ್ನಡೆ ಸಾಧಿಸಿದೆ. ಆದರೆ, ಬಿಜೆಪಿ 19,477 ಮತ ಗಳನ್ನು ಹೆಚ್ಚುವರಿಯಾಗಿ ಪಡೆದಿದೆ.

ಹೊಳೆನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‍ನ ಹೆಚ್.ಡಿ.ರೇವಣ್ಣ 82,325, ಕಾಂಗ್ರೆಸ್‍ನ ಬಾಗೂರು ಮಂಜೇಗೌಡ 64,898 ಹಾಗೂ ಬಿಜೆಪಿಯ ಎಂ.ಎನ್.ರಾಜು ಕೇವಲ 3,556 ಮತ ಪಡೆದಿದ್ದರು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 1,07,027 ಹಾಗೂ ಬಿಜೆಪಿ 40,984 ಮತ ಪಡೆದಿದ್ದು ಜೆಡಿಎಸ್ 66,043 ಮುನ್ನಡೆ ಪಡೆದಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಬಿಜೆಪಿ 33,761 ಹೆಚ್ಚುವರಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸಕಲೇಶಪುರ ಮತ್ತು ಆಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಹೆಚ್.ಕೆ. ಕುಮಾರಸ್ವಾಮಿ 62,262, ಬಿಜೆಪಿಯ ನಾರ್ವೆ ಸೋಮಶೇಖರ್ 57,320 ಹಾಗೂ ಕಾಂಗ್ರೆಸ್‍ನ ಸಿದ್ದಯ್ಯ 37,002 ಮತ ಪಡೆದಿದ್ದರು. ಲೋಕ ಸಭೆ ಚುನಾವಣೆಯಲ್ಲಿ ಮೈತ್ರಿ ಲಾಭ ಎರಡೂ ಪಕ್ಷಗಳಿಗೂ ಸಮಾನವಾಗಿ ಹಂಚಿಕೆಯಾ ಗಿದ್ದರೂ ಬಿಜೆಪಿ ಮತಗಳಿಕೆ ಹೆಚ್ಚಿಸಿ ಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 71,619, ಬಿಜೆಪಿಯ ಎ.ಮಂಜು 67,608 ಮತ ಗಳಿಸಿದ್ದಾರೆ. ಜೆಡಿಎಸ್ 4,011 ಮತಗಳ ಮುನ್ನಡೆ ಪಡೆದಿದ್ದು, ಇಲ್ಲಿ ಬಿಜೆಪಿ 10,288 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ.

ಉಳಿದಂತೆ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಬೆಳ್ಳಿಪ್ರಕಾಶ್ 62,235, ಜೆಡಿಎಸ್‍ನ ವೈ.ಎಸ್.ವಿ.ದತ್ತ 46,868 ಹಾಗೂ ಕಾಂಗ್ರೆಸ್‍ನ ಕೆ.ಎಸ್. ಆನಂದ್ 46,142 ಮತಗಳಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 63,855 ಹಾಗೂ ಬಿಜೆಪಿ 75,874 ಮತ ಗಳಿಸುವ ಮೂಲಕ 12,019 ಮುನ್ನಡೆ ಸಾಧಿಸಿದೆ. ಬಿಜೆಪಿ 13,639 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ.

ಒಟ್ಟಾರೆ ಬಿಜೆಪಿ 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲಿ ಪಡೆದಿದ್ದ ಮತಗಳಿಕೆ ಪ್ರಮಾಣವನ್ನು 2019ರ ಲೋಕಸಭಾ ಚುನಾ ವಣೆಯಲ್ಲಿ ಹೆಚ್ಚಿಸಿಕೊಂಡಿದ್ದು, ಜಿಲ್ಲೆಯಲ್ಲಿ ತನ್ನ ಹಿಡಿತ ಸಾಧಿಸಲು ಮುಂದಾಗಿದೆ.

ಕಾಂಗ್ರೆಸ್ ಮತಗಳು ಬಿಜೆಪಿ ಪಾಲು

ಹಾಸನ ಹೊರತುಪಡಿಸಿ ಉಳಿದ ಎಲ್ಲಾ 6 ಕ್ಷೇತ್ರಗಳಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಲಾಭ ಜೆಡಿಎಸ್ ಬದಲಿಗೆ ಬಿಜೆಪಿಗೆ ದಕ್ಕಿದೆ. ಇದರಿಂದಾಗಿ ಈವ ರೆಗೂ ಸಂಘಟನೆ, ಪದಾಧಿಕಾರಿಗಳ ನೇಮಕ, ಸಭೆಗಳನ್ನು ಆಯೋಜಿಸುವು ದಕ್ಕೂ ಬಿಜೆಪಿ ಮುಖಂಡರು ಪರದಾ ಡುತ್ತಿದ್ದ ಹೊಳೆನರಸೀಪುರ, ಶ್ರವಣಬೆಳ ಗೊಳ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಆಶ್ಚರ್ಯಕರ ರೀತಿಯಲ್ಲಿ ಮತ ಗಳಿಕೆಯಾಗಿದೆ. ಜೆಡಿ ಎಸ್ ಮುಖಂಡರು ಕಾಂಗ್ರೆಸ್‍ನ ನಾಯ ಕರು, ಕಾರ್ಯಕರ್ತರನ್ನು ಎಷ್ಟೇ ವಿಶ್ವಾಸಕ್ಕೆ ಪಡೆದರೂ ಸಂಪೂರ್ಣವಾಗಿ ಕಾಂಗ್ರೆಸ್ ಮತಗಳು ಜೆಡಿಎಸ್‍ಗೆ ವರ್ಗಾವಣೆಯಾ ಗುವ ಬದಲು ಬಿಜೆಪಿಗೆ ಶಕ್ತಿ ಹೆಚ್ಚಿಸಿವೆ. ಇದರ ಹಿಂದೆ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ವರ್ಚಸ್ಸಿನ ಕಾರಣವೂ ಇದೆ.

ಕಡೂರು ಕ್ಷೇತ್ರದಲ್ಲ್ಲಿ ಬಿಜೆಪಿಗೆ ಹೆಚ್ಚು ಮತ

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಪಡೆದುಕೊಂಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಇಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ 15 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು 75,874 ಮತ ಪಡೆದುಕೊಂಡಿದ್ದು, ಜೆಡಿಎಸ್‍ನ ಪ್ರಜ್ವಲ್ ರೇವಣ್ಣ 63,855 ಮತ ಪಡೆದುಕೊಂಡಿದ್ದಾರೆ. ಇಲ್ಲಿ ಬಿಜೆಪಿ ಈ ಬಾರಿ 12,019 ಮತಗಳನ್ನು ಹೆಚ್ಚಾಗಿ ಪಡೆದುಕೊಂಡಿದೆ.

ಉಳಿದಂತೆ ಬಿಜೆಪಿಯ ಎ.ಮಂಜು ಹೊಳೆನರಸೀಪುರ, ಶ್ರವಣಬೆಳಗೊಳ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಲ್ಲಿ ದೋಸ್ತಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಗೆ ತೀವ್ರ ಪೈಪೆÇೀಟಿ ನೀಡಿದ್ದಾರೆ.

ಬಿಜೆಪಿ ಇಲ್ಲಿ ಸೋಲು ಕಂಡಿದ್ದರೂ ಮತಗಳಿಕೆಯಲ್ಲಿ ದಾಪುಗಾಲಿಟ್ಟಿದೆ. 2014ರ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಯಿದ್ದ ಸಮಯದಲ್ಲಿಯೂ ಬಿಜೆಪಿ ಕೇವಲ 1.65 ಲಕ್ಷ ಮತ ಗಳಿಸಿತ್ತು. ಈ ಬಾರಿ 5.35 ಲಕ್ಷ ಮತ ಗಳಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ನಡೆಸಿದೆ. ನಾವು ಪರಾಭವಗೊಂಡಿದ್ದರೂ ಹತಾಶರಾಗುವ ಫಲಿತಾಂಶವೇನೂ ಬಂದಿಲ್ಲ.
-ಪ್ರೀತಂ ಜೆ.ಗೌಡ, ಶಾಸಕ

ಮೋದಿ ಅಲೆ ಹಾಗೂ ಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತು ಜಿಲ್ಲೆ ಯಲ್ಲಿ ಬಿಜೆಪಿಗೆ ಕಳೆದೆರಡು ಚುನಾವಣೆಗಿಂತ ಹೆಚ್ಚಿನ ಮತ ಲಭಿಸಿದೆ. ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣದಲ್ಲಿ ಕೇವಲ 5ರಿಂದ 6 ಸಾವಿರ ಮತ ಪಡೆಯುತ್ತಿದ್ದ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚನ್ನರಾಯಪಟ್ಟಣದಲ್ಲಿ 55 ಸಾವಿರ, ಹೊಳೆನರಸೀಪುರದಲ್ಲಿ 47 ಸಾವಿರ ಮತ ಬಂದಿದೆ. ಜಿಲ್ಲೆಯಲ್ಲಿ ಜೆಡಿಎಸ್‍ಗೆ ಪರ್ಯಾಯ ಬಿಜೆಪಿ ಎಂದು ಜಿಲ್ಲೆಯ ಜನರು ಮನಗಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ ಇತರೆ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುವುದು. – ನವೀಲೆ ಅಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ, ಹಾಸನ.

Translate »