ಯಳಂದೂರು: ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ದಸಂಸನ ಜಿಲ್ಲಾ ಸಂಚಾಲಕ ಸಿ. ರಾಜಣ್ಣ ಮಾತನಾಡಿ, ಯಳಂದೂರು ತಾಲೂಕು ಕೇಂದ್ರವಾಗಿದೆ. ಇಲ್ಲಿ 30 ಹಾಸಿಗೆಗಳ ಆಸ್ಪತ್ರೆ ಮಾತ್ರ ಇದೆ. ಆದರೆ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಮೂಲ ಸೌಕರ್ಯಗಳಿಲ್ಲದೆ ವೈದ್ಯರು ಹಾಗೂ ಶುಶ್ರೂಶಕರಿಗೆ ಸಮಸ್ಯೆಯಾಗಿದೆ. ಕೊಠಡಿ ಹಾಗೂ ಹಾಸಿಗೆ ಕೊರತೆಯಿಂದ ದೂರದ ಚಾಮರಾಜನಗರ, ಕೊಳ್ಳೇಗಾಲ, ಮೈಸೂರಿನ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಆಸ್ಪತ್ರೆಯನ್ನು 100 ಹಾಸಿಗೆಳನ್ನಾಗಿ ಮೇಲ್ದರ್ಜೆಗೇರಿಸಲು 2007ರಲ್ಲಿ ಅನುಮೋದನೆ ದೊರಕಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ಇನ್ನೂ ಈಡೇರಿಲ್ಲ.
ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ, ಶುದ್ಧ ಕುಡಿಯುವ ನೀರಿನ ಘಟಕವಿಲ್ಲ, ಜಿಲ್ಲಾ ಆರೋಗ್ಯ ಇಲಾಖೆಯ ತುರ್ತು ಚಿಕಿತ್ಸಾ ವಾಹನ ಕೆಟ್ಟು ನಿಂತಿದ್ದು ಇದರ ದುರಸ್ತಿಯಾಗಿಲ್ಲ. ಇಲ್ಲಿ ಕ್ಯಾಂಟೀನ್‍ನ ವ್ಯವಸ್ಥೆಯೂ ಇಲ್ಲ. ಐಸಿಯು ಘಟಕವಿದ್ದರು ಬಳಕೆಯಾಗುತ್ತಿಲ್ಲ. ಡಯಾಲಿಸಿಸ್ ಕೇಂದ್ರ ಇನ್ನೂ ಸ್ಥಾಪನೆಯಾಗಿಲ್ಲ. ಹಾಗಾಗಿ ಇಲ್ಲಿನ ರೋಗಿಗಳಿಗೆ ಸಮಸ್ಯೆಯಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ನೀಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಶಾಸಕ ಭರವಸೆ: ಪ್ರತಿಭಟನಾ ನಿರತ ಸ್ಥಳಕ್ಕೆ ಶಾಸಕ ಎನ್. ಮಹೇಶ್ ಭೇಟಿ ಮಾತನಾಡಿ, ಈಗಾಗಲೇ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕೇವಲ ಸರ್ಕಾರಿ ಆದೇಶವಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಹಾಗೂ ಹಣಕಾಸು ಇಲಾಖೆಯಿಂದ ಯಾವ ರೀತಿಯ ಪ್ರಕ್ರಿಯೆಗಳು ನಡೆದಿಲ್ಲ. ಆರೋಗ್ಯ ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟು ಹಣ ಬಿಡುಗಡೆ ಮಾಡಿಸಲಾಗುವುದು. ಸಾರ್ವಜನಿಕ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲು ಸೂಚನೆ ನೀಡಲಾಗುವುದು. ಯಳಂದೂರು ತಾಲೂಕಿಗೂ ಹೊಸದಾಗಿ ಆಂಬುಲೆನ್ಸ್ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ತಹಶೀಲ್ದಾರ್ ವರ್ಷ ಒಡೆಯರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ದಸಂಸ ಕಂದಹಳ್ಳಿ ನಾರಾಯಣ, ದೊರೆಸ್ವಾಮಿ, ಶಿವಕುಮಾರ್ ಕುಣಗಳ್ಳಿ, ಚಂದ್ರಶೇಖರ್, ಗಣಿಗನೂರು, ಅನಂತ್ ಮದ್ದೂರು, ಅಂಬಳೆ ಚಾಮರಾಜು, ಶಂಕರಮೂರ್ತಿ, ಪಿ. ರಂಗಸ್ವಾಮಿ, ಸಿದ್ದರಾಜು, ನಂಜುಂಡಸ್ವಾಮಿ, ನಾಗರಾಜು ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ವೈದ್ಯಾಧಿಕಾರಿ ಡಾ.ಬಸವರಾಜು, ಡಾ. ನಾಗೇಂದ್ರಮೂರ್ತಿ, ಡಾ. ಅರುಣ್‍ಕುಮಾರ್ ಇತರರು ಇದ್ದರು.