ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹಿಸಿ ಪ್ರತಿಭಟನೆ

June 29, 2018

ಚಾಮರಾಜನಗರ: ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ ಆಗ್ರಹಿಸಿ ಸುವರ್ಣ ಕನ್ನಡ ಶಿಕ್ಷಣ ವೇದಿಕೆಯ ಕಾರ್ಯಕರ್ತರು ನಗರದ ನಗರಸಭೆ ಕಾರ್ಯಾಲಯದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಕಾರ್ಯಾಲಯದ ಮುಂದೆ ಜಮಾಯಿಸಿದ ವೇದಿಕೆ ಕಾರ್ಯಕರ್ತರು, ನಗರಸಭಾ ಅಧಿಕಾರಿಗಳು, ಅಧ್ಯಕ್ಷರು, ನದಸ್ಯರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಪ್ರತಿದಿನ ಸಹಸ್ರಾರು ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ನಗರದ ಪ್ರಮುಖ ವೃತ್ತಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ನಾಗರಿಕರು ಪರಿತಪಿಸುವಂತಾಗಿದೆ. ಇದ್ದ ಒಂದೆರೆಡು ಸಾರ್ವ ಜನಿಕ ಶೌಚಾಲಯವನ್ನು ಮುಚ್ಚಲಾಗಿದೆ. ಆದ ಕಾರಣ ತಕ್ಷಣವೇ ನಗರದ ಎಲ್ಲೆಡೆ ಕನಿಷ್ಠ 50 ಸಾರ್ವಜನಿಕ ಶೌಚಾಲಯಗಳು ನಿರ್ಮಿಸಬೇಕು. ಹಾಗೂ ಬಾಗಿಲು ಮುಚ್ಚಿರುವ ಶೌಚಾ ಲಯಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ನಗರಸಭೆ ಎಇಇ ಸತ್ಯಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ನಗರದ 26 ಕಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ತೀರ್ಮಾನಿಸಾಗಿತ್ತು. ಇದಕ್ಕಾಗಿ 2 ಬಾರಿ ಟೆಂಡರ್ ಕರೆಯಲಾಗಿದೆ. ಈಗ ಮತ್ತೇ ಮರು ಟೆಂಡರ್ ಕರೆಯಲಾಗುವುದು. ಹಾಗೂ ಮುಚ್ಚಿರುವ ಶೌಚಾಲಯಗಳನ್ನು ತೆರೆಯುವ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಪ್ರತಿಭಟನಾಕಾರರು ನಗರಸಭಾ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. 420 ನಗರಸಭಾ ಸದಸ್ಯರುಗಳಿಗೆ ಧಿಕ್ಕಾರ ಎಂದರು. ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ನಗರಭೆಗೆ ಆಗಮಿಸುತ್ತಿದ್ದ ಸದಸ್ಯರನ್ನು ಇದು ಕೆರಳಿಸಿತು. ಈ ಹಂತದಲ್ಲಿ ಪ್ರತಿಭಟನಾಕಾರರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಇದ್ದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ವೇದಿಕೆ ಜಿಲ್ಲಾ ಅಧ್ಯಕ್ಷ ಸುರೇಶ್ ವಾಜಪೇಯಿ, ಮುಖಂಡ ಸಿದ್ದರಾಜು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »