ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

July 8, 2018

ಮದ್ದೂರು/ ಶ್ರೀರಂಗಪಟ್ಟಣ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಶನಿವಾರ ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

ಮದ್ದೂರು: ಪಟ್ಟಣದ ಪ್ರವಾಸಿ ಮಂದಿರ ದಿಂದ ಮೆರವಣಿಗೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು, ದಾರಿಯುದ್ದಕ್ಕೂ ಸರ್ಕಾರದ ಅವೈಜ್ಞಾನಿಕ ತೀರ್ಮಾನಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಾಲೂಕು ಕಚೇರಿಗೆ ಆಗಮಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷೆ ಎಚ್.ವಿಜಯಲಕ್ಷ್ಮಿ ಮಾತನಾಡಿ, ಕೇಂದ್ರ ಸರ್ಕಾರವು ಫಲಾ ನುಭವಿಗಳಿಗೆ ಪೌಷ್ಟಿಕ ಆಹಾರದ ಬದಲಿಗೆ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಹಾಗೂ ಪ್ಯಾಕೆಟ್ ಪುಡ್ ವಿತರಿಸುವುದಾಗಿ ತಿಳಿಸಿದೆ. ಅಲ್ಲದೇ ಶಾಲಾ ಪೂರ್ವ ಶಿಕ್ಷಣವನ್ನು ಖಾಸಗಿಯ ವರಿಗೆ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಅಲ್ಲದೇ ಹಂತ ಹಂತವಾಗಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಇದರಿಂದಾಗಿ ಈ ಯೋಜನೆಯಡಿ ದುಡಿಯು ತ್ತಿರುವ 28ಲಕ್ಷ ನೌಕರರು ಬೀದಿ ಪಾಲಾಗುವ ಆತಂಕ ಕಾಡಿದೆ ಎಂದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎನ್.ತನುಜ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ಯೋಗನರಸಿಂಹ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಸಂಘಟನಾ ಕಾರ್ಯ ದರ್ಶಿ ಸಿ.ಆನಂದಮ್ಮ, ಖಜಾಂಚಿ ಶೈಲಜಾ, ಪದಾಧಿಕಾರಿಗಳಾದ ಎಂ.ಆರ್.ಶೋಭಾ, ಮೀನಾಕ್ಷಿ, ಶಾರದ ಸೇರಿದಂತೆ ನೂರಾರು ನೌಕರರಿದ್ದರು.

ಶ್ರೀರಂಗಪಟ್ಟಣ: ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಮೆರವಣಿಗೆ ಹೊರಟ ಅಂಗನವಾಡಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಮಾಸಿಕ ಕನಿಷ್ಠ 3 ಸಾವಿರ ರೂ. ಸಂಬಳ ಜಾರಿಗೊಳಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿ ಯರನ್ನು ತುರ್ತಾಗಿ ನೇಮಕ ಮಾಡಿ ಮಾತೃ ಪೂರ್ಣ ಯೋಜನೆ ಯಶಸ್ವಿಯಾಗಿ ಜಾರಿ ಗೊಳಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳಿಂದ ಇಎಸ್‍ಐ, ಭವಿಷ್ಯನಿಧಿ, ಗ್ರಾಜ್ಯುಯಿಟಿ ಜಾರಿ ಮಾಡಬೇಕು, ರಾಜ್ಯಾ ದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್‍ಕೆಜಿ ಹಾಗೂ ಯುಕೆಜಿ ಶಾಲೆಗಳನ್ನು ತೆರೆದಿದ್ದು ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಅಂಗನ ವಾಡಿ ಕಾರ್ಯಕರ್ತೆಯರಿಗೆ ಹಾಲಿ ಜವಾಬ್ದಾರಿವಹಿಸಿ ತರಬೇತಿ ನೀಡುವುದು. ಬಹುತೇಕ ಖಾಸಗಿ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ತುರ್ತು ಕ್ರಮ ಕೈಗೊಳ್ಳ ಬೇಕು ಎಂದು ಫೆಡರೇಷನ್‍ನ ಸದಸ್ಯರು ಒತ್ತಾಯಿಸಿದರು.

ಫೆಡರೇಷನ್‍ನ ಅಧ್ಯಕ್ಷೆ ಸಿ.ಪದ್ಮ, ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಸದಸ್ಯರಾದ ಕೆ.ಆರ್.ಶೈಲಜಾ, ಎಂ.ದುಂಡಮ್ಮ, ಗಿರಿಜಾ, ಸರೋಜಮ್ಮ, ಮೀನಾಕ್ಷಿ, ಎ.ಎಸ್.ಶೋಭ, ಪುಷ್ಪಲತಾ ಸೇರಿದಂತೆ 300ಕ್ಕೂ ಹೆಚ್ಚು ಕಾರ್ಯಕರ್ತೆಯರು ಹಾಜರಿದ್ದರು.

Translate »