ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

August 3, 2019

ಮೈಸೂರು,ಆ.2(ಎಂಟಿವೈ)- ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ಕೋಡಿಫಿಕೇಶನ್ ಜಾರಿ ಗೊಳಿಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಚಳವಳಿ ಬೆಂಬಲಿಸಿ ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.

ಮೈಸೂರಿನ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ, ಎಐ ಟಿಯುಸಿ, ಸಿಐಟಿಯು, ಎಐಯುಟಿಯುಸಿ ಹಾಗೂ ಇತರ ಸ್ವತಂತ್ರ ಫೆಡರೇಷನ್,ಅಸೋಸಿಯೇಷನ್, ಟ್ರೇಡ್ ಯೂನಿಯನ್ ಹಾಗೂ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧದ ನಡು ವೆಯೂ, ನಿಯಮಗಳನ್ನು ಗಾಳಿಗೆ ತೂರಿ, ರಾಜ್ಯಗಳ ವ್ಯಾಪ್ತಿಯಲ್ಲಿ ಬರುವ ಸಹವರ್ತಿ ಪಟ್ಟಿಯನ್ನು ಕಡೆಗಣಿಸಿ ಕಾರ್ಮಿಕ ಕಾನೂನುಗಳ ಕೋಡಿಫಿಕೇಶನ್ ಅನ್ನು ಕಾರ್ಮಿಕರ ಮೇಲೆ ಹೇರಲಾಗುತ್ತಿದೆ. ಜು.23 ರಂದು `ವೇತನ ಮಸೂದೆ 2019′ ಮತ್ತು ಔದ್ಯೋ ಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯ ಸ್ಥಳದ ಸ್ಥಿತಿ ಗತಿ ಮಸೂದೆ 2019′ ಅನ್ನು ವಿಪಕ್ಷಗಳ ಆಪೇಕ್ಷ ಹಾಗೂ ಹಲವಾರು ಕರಾರುಗಳನ್ನು ಕಡೆಗಣಿಸಿ ಲೋಕಸಭೆಯಲ್ಲಿ ಮಂಡಿಸುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ಪ್ರಸ್ತುತ ಜಾರಿಯಲ್ಲಿದ್ದ 13 ಪ್ರತ್ಯೇಕ ಕಾರ್ಮಿಕ ಕಾನೂನುಗಳ ಬದಲಿಗೆ ಹೊಸ ಕಾನೂನು ಜಾರಿಗೆ ತರಲಾಗಿದೆ. ಇದು 10ಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ದಿಮೆಗಳಿಗೆ ಮಾತ್ರ ಅನ್ವಯ ವಾಗುವುದರಿಂದ ಅಸಂಘಟಿತ ವಲಯ, ಹೊರ ಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ಶೇ.90 ಮಂದಿ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈಗಿರುವ ಕಾರ್ಮಿಕರ ಸವಲತ್ತು ಗಳನ್ನು ಹಿಂಪಡೆದು ಮಾಲೀಕರಿಗೆ ಪ್ರಯೋಜನವಾ ಗುವ ಕಾನೂನುಗಳನ್ನು ಕಾರ್ಮಿಕರ ಮೇಲೆ ಹೇರುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಮಸೂದೆ ಇದಾಗಿದೆ. ನೂತನ ಮಸೂದೆ ಪ್ರಕಾರ ಕಾರ್ಮಿಕರಿಗೆ ಕೆಲಸದ ವೇಳೆ ಅನಾಹುತ ಸಂಭವಿಸಿ ದಾಗ ಕಾರ್ಮಿಕರು ಹಾಗೂ ಅವರ ಯೂನಿಯನ್ ಗಳು ತಮ್ಮ ಹಕ್ಕುಗಳ ಕುರಿತು ಮಾತನಾಡುವಂತಿಲ್ಲ ಹಾಗೂ ಮಾಲೀಕರ ಉತ್ತರದಾಯಿತ್ವವನ್ನು ಒತ್ತಾ ಯಿಸದಂತೆ ನಿರ್ಬಂಧಿಸುವ ಮೂಲಕ ಕಾರ್ಮಿಕ ರನ್ನು ಶೋಷಿಸಲಾಗುತ್ತಿದೆ ಎಂದು ದೂರಿದರು.

ಸಾರಿಗೆ ಕಾರ್ಮಿಕ ಸಂಘ ವಿರೋಧಿಸುತ್ತಿರುವ ಮೋಟಾರು ವಾಹನ ಮಸೂದೆಯನ್ನು ಮಂಡಿಸಿ ಶಾಸನವಾಗಿಸಿದೆ. ಬಿಜೆಪಿಯು ಇಂತಹ ಮಸೂದೆ ಗಳನ್ನು ಜಾರಿಗೆ ತರುವ ಮೂಲಕ ಮತ್ತೊಮ್ಮೆ ತಾವು ಮಾಲೀಕರ ಪರ ಇರುವುದೆನ್ನುವುದನ್ನು ಸಾಬೀತು ಪಡಿಸಿಕೊಳ್ಳುತ್ತಿದೆ. ಕೇಂದ್ರದ ಬಿಜೆಪಿಯ ನಡೆಯನ್ನು ಖಂಡಿಸಿ ದೇಶವ್ಯಾಪ್ತಿ ನಡೆಯುತ್ತಿರುವ ಪ್ರತಿಭಟನೆ ಯನ್ನು ಬೆಂಬಲಿಸಿ ಮೈಸೂರಿನಲ್ಲಿಯೂ ಪ್ರತಿಭಟಿಸು ತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿಯ ಹೆಚ್.ಬಿ. ರಾಮಕೃಷ್ಣ, ಸೋಮರಾಜೇ ಅರಸ್, ಸಿಐಟಿಯು ಜಿ.ಜಯರಾಂ, ಶಶಿಕುಮಾರ್ ಸೇರಿದಂತೆ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Translate »