ಚಾಮರಾಜನಗರ: ರಸ್ತೆ ಅಗಲೀಕರಣ ವೇಳೆ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಟ್ಟಿಲ್ಲ ಮತ್ತು ಪರಿಹಾರ ನೀಡಿಲ್ಲ ಎಂದು ಆರೋಪಿಸಿ ನಗರದ ಡಿವಿಯೇಷನ್ ರಸ್ತೆ ಬದಿಯ ನಿವಾಸಿಗಳು ವೃದ್ಧೆಯೊಬ್ಬರ ಶವವನ್ನು ರಸ್ತೆಯಲ್ಲಿ ಇಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.
ಡಿವಿಯೇಷನ್ ರಸ್ತೆ ಬದಿಯಲ್ಲಿ ವಾಸವಿದ್ದ ಪುಟ್ಟಸಿದ್ದಮ್ಮ (75) ಸೋಮವಾರ ಬೆಳಗಿನ ಜಾವ ನಿಧನರಾಗಿದ್ದರು. ಇವರ ಶವವನ್ನು ನಗರದ ಸಂತೇಮರಹಳ್ಳಿ ವೃತ್ತದ ಬಳಿಯ ರಸ್ತೆಯಲ್ಲಿ ಇಟ್ಟು ಕುಟುಂಬಸ್ಥರು, ನಿವಾಸಿಗಳು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಯಾಣಿಕರು ಪರದಾಡುವಂತಾಗಿತ್ತು.
ನಗರದ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209 ರಸ್ತೆಯನ್ನು ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸಲಾಗಿತ್ತು. ಈ ವೇಳೆ ನಗರದ ಡಿವಿಯೇಷನ್ ರಸ್ತೆಯ ಬದಿಯಲ್ಲಿ ವಾಸವಿದ್ದ ಪುಟ್ಟಸಿದ್ದಮ್ಮ ಅವರ ಮನೆಯನ್ನು ತೆರವುಗೊಳಿಸಲಾಗಿತ್ತು. ನಂತರ ಉಳಿದ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ವಿದ್ದರು. ಇವರು ಸೋಮವಾರ ಬೆಳಗಿನ ಜಾವ ನಿಧನರಾದರು. ಶವ ಇಡಲು ಜಾಗವಿಲ್ಲದ ಕಾರಣ ಅವರ ಸಂಬಂಧಿಕರು, ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಶವವನ್ನು ರಸ್ತೆಯಲ್ಲಿ ಇಟ್ಟುಕೊಂಡು ಪ್ರತಿಭಟನೆ ಆರಂಭಿಸಿದರು. ರಸ್ತೆ ಅಭಿವೃದ್ಧಿಗಾಗಿ ಮನೆ ಕಳೆದುಕೊಂಡಿದ್ದ ಪುಟ್ಟಸಿದ್ದಮ್ಮ ಅವರಿಗೆ ಮನೆ ನಿರ್ಮಿಸಿಕೊಟ್ಟಿಲ್ಲ. ಪರಿಹಾರದ ಹಣವನ್ನು ನೀಡಿಲ್ಲ. ಇದಲ್ಲದೇ ಹಲವಾರು ಜನರು ಮನೆ, ನಿವೇಶನ ಕಳೆದು ಕೊಂಡಿದ್ದು, ಯಾರಿಗೂ ಪರಿಹಾರ ಅಥವಾ ಮನೆ ನಿರ್ಮಿಸಿ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರೆಸಿದರು. ನಂತರ ನಗರಸಭೆ ಪೌರಾಯುಕ್ತ ಎನ್. ರಾಜಣ್ಣ ಸ್ಥಳಕ್ಕೆ ಆಗಮಿಸಿ, ರಸ್ತೆ ಅಭಿವೃದ್ಧಿಗಾಗಿ ಮನೆ ಮತ್ತು ನಿವೇಶನ ಕಳೆದುಕೊಂಡಿರುವವರಿಗೆ ಪರಿಹಾರ ದೊರಕಿಸುವುದಕ್ಕಾಗಿ ಶೀಘ್ರದಲ್ಲಿಯೇ ಸಭೆ ಕರೆಯ ಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಯನ್ನು ವಾಪಸ್ ಪಡೆಯಲಾಯಿತು. ಜಿಪಂ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ನಗರಸಭೆ ಮಾಜಿ ಅಧ್ಯಕ್ಷ ಸಿ.ಎಸ್. ಸುರೇಶ್ ನಾಯಕ, ಸದಸ್ಯ ಶಿವರಾಜು, ಮುಖಂಡರಾದ ಕಂಟ್ರಾಕ್ಟರ್ ಸೋಮನಾಯಕ, ಮಹೇಶ್, ನಂಜುಂಡನಾಯ್ಕ, ವರದ, ಮಂಜು, ಮಹೇಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.