ಮಲ್ಪೆ ಸಮುದ್ರದಲ್ಲಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ
ಹಾಸನ

ಮಲ್ಪೆ ಸಮುದ್ರದಲ್ಲಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ

January 8, 2019

ಹಾಸನ: ಬೋಟು ಸಹಿತ ಕಾಣೆಯಾಗಿರುವ ಮೀನುಗಾರರನ್ನು ಶೀಘ್ರವೇ ಪತ್ತೆ ಹಚ್ಚಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಯುವ ಕರ್ನಾಟಕ ವೇದಿಕೆ ಯಿಂದ ಸೋಮವಾರ ಬೆಳಿಗ್ಗೆ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಸುವರ್ಣ ತ್ರಿಭಜ ಎಂಬ ಬೋಟಲ್ಲಿ ಅರಬ್ಬಿ ಸಮುದ್ರದಲ್ಲಿ ಗೋವಾ, ಮಹಾರಾಷ್ಟ್ರ ಗಡಿ ಭಾಗದ ದುರ್ಗದ ಕಡೆಗೆ ಡಿಸೆಂಬರ್ 13ರಂದು ಹೋದವರು ಡಿಸೆಂಬರ್ 15 ರಂದು ರಾತ್ರಿ 1 ಗಂಟೆಗೆ ಬೋಟುಗಳ ಸಮೇತ ಕಾಣೆಯಾಗಿದ್ದಾರೆ ಎಂದರು.

23 ದಿನಗಳು ಕಳೆದರೂ ಮೀನುಗಾರರನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಫಲವಾಗಿದೆ ಮತ್ತು ನಿರ್ಲಕ್ಷ್ಯ ಪ್ರದರ್ಶಿಸಿದೆ ಎಂದು ದೂರಿದರು. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರು ಹತ್ಯೆಯಾದರೆ ಸರ್ಕಾರವೇ ಖುದ್ದು ಭೇಟಿ ನೀಡುತ್ತದೆ. ಆದರೆ ಬಡ ಮೀನುಗಾರರ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುವುದನ್ನು ನಾವು ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿ ದರು. ಕೂಡಲೇ ಬೋಟು ಸಹಿತ ಕಾಣೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮ ಮಾರ್ಗ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಆರ್.ಪ್ರಸಾದ್, ಪದಾಧಿಕಾರಿಗಳಾದ ಹೆಚ್.ಎಸ್.ಪ್ರದೀಪ್, ದೇವೆಂದ್ರ ಪ್ರಸಾದ್, ಜಿ.ಆರ್.ಹೇಮಂತ್, ಭುವನೇಶ್, ಸಿದ್ದಾರ್ಥ, ಸುರೇಶ್, ಸಂತೋಷ್ ಹಾಗೂ ಯುವ ಕರ್ನಾಟಕ ಸಂಘದ ಸದಸ್ಯರು ಇತರರು ಉಪಸ್ಥಿತರಿದ್ದರು.

Translate »