ಚಾಮರಾಜನಗರ: ವಿವಿಧ ಇಲಾಖೆಗಳಡಿ ನಿರ್ವಹಣೆ ಯಾಗುತ್ತಿರುವ ಹಾಸ್ಟೆಲ್‍ಗಳಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಂಎಸ್‍ಎಇ ಮತ್ತು ಗಣಿ)ಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಠಾರಿಯಾ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹಾಸ್ಟೆಲ್‍ಗಳಲ್ಲಿ ತಾವು ಭೇಟಿ ನೀಡಿದ್ದ ವೇಳೆ ಹಲವು ಕಡೆ ಮೂಲಸೌಕರ್ಯ ಕೊರತೆ ಕಂಡುಬಂದಿದೆ. ವಿದ್ಯುತ್ ದೀಪ, ಶೌಚಾಲಯಗಳ ಸ್ವಚ್ಚತೆ, ಇತರೆ ಸೌಕರ್ಯ ಗಳನ್ನು ಕಲ್ಪಿಸುವಲ್ಲಿ ಕೊರತೆ ಇರುವುದನ್ನು ಗಮನಿಸಲಾಗಿದೆ. ಮೂಲ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಹಾಸ್ಟೆಲ್‍ಗಳಲ್ಲಿ ಕಲ್ಪಿಸಬೇಕು. ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ, ಪರಿಶೀಲಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಉಸ್ತು ವಾರಿ ಕಾರ್ಯದರ್ಶಿ ನಿರ್ದೇಶನ ನೀಡಿದರು.
ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿನಿಲಯಗಳಲ್ಲಿ ದಾಖಲಾತಿ ಸಂಖ್ಯೆ ಕಡಿಮೆ ಇರುವ ಬಗ್ಗೆ ಮಾಹಿತಿ ಪಡೆದ ಅವರು ಸದರಿ ವಿದ್ಯಾರ್ಥಿನಿಲಯದಲ್ಲಿ ಎಲ್ಲಾ ಅನುಕೂಲಗಳು ವಿದ್ಯಾರ್ಥಿಗಳಿಗೆ ಇರುವುದರಿಂದ ಪೋಷಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ಬೇಕಿರುವ ಇನ್ನೂ ಎಲ್ಲ ನೆರವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿ ನಿಲಯದ ಪ್ರಯೋಜನವನ್ನು ಪಡೆಯಲು ಉತ್ತೇಜಿಸಬೇಕು ಎಂದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ವಿದ್ಯಾರ್ಥಿ ವೇತನ ಮಂಜೂರು ಮಾಡಲು ಕೈಗೊಳ್ಳಬೇಕಿರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಕಾರ್ಯವನ್ನು ಸಹ ಆದಷ್ಟು ಶೀಘ್ರವೇ ಪೂರೈಸಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ತಕ್ಕ ಕ್ರಮ ತೆಗೆದುಕೊಳ್ಳುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿಯುವ ನೀರಿನ ಕಾಮಗಾರಿಗಳನ್ನು ವಿಳಂಬ ಮಾಡದಂತೆ ಪೂರ್ಣಗೊಳಿಸಬೇಕು. ಮೇವು ದಾಸ್ತಾನು ಸಂಗ್ರ ಹಣೆ ಮಾಡಬೇಕು. ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸಮಸ್ಯೆ ಕಂಡುಬರದಂತೆ ಎಲ್ಲಾ ಅಗತ್ಯ ಮುಂಜಾಗ ರೂಕತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಪ್ರಸಕ್ತ ಸಾಲಿನ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕು. ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆ ಯಾಗಿರುವ ಫಲಾನುಭವಿಗಳಿಗೆ ಕೊಳವೆ ಬಾವಿ ಸೌಲಭ್ಯ ತ್ವರಿತಗತಿಯಲ್ಲಿ ತಲುಪಿಸಬೇಕು. ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡಬಾರದು ಎಂದು ರಾಜೇಂದರ್ ಕುಮಾರ್ ಕಠಾರಿಯಾ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹೋಬಳಿ ಮಟ್ಟದ ಕಂದಾಯ ಅಧಿಕಾರಿಗಳೂ ಸೇರಿದಂತೆ ಎಲ್ಲರೂ ಯೋಜನೆಗಳ ಅನುಷ್ಠಾನಕ್ಕಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪ ವಿಭಾಗಾಧಿಕಾರಿ ನಿಖಿತ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.