ಉಗ್ರರ ದಂಡಿಸುವ ಅಧಿಕಾರ ಭಾರತಕ್ಕಿದೆ: ಪಾಕ್‍ಗೆ ಕಟು ಎಚ್ಚರಿಕೆ
ಮೈಸೂರು

ಉಗ್ರರ ದಂಡಿಸುವ ಅಧಿಕಾರ ಭಾರತಕ್ಕಿದೆ: ಪಾಕ್‍ಗೆ ಕಟು ಎಚ್ಚರಿಕೆ

February 15, 2019

ಹೊಸದಿಲ್ಲಿ: ಪುಲ್ವಾಮಾದಲ್ಲಿ ಇಂದು 44ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಯನ್ನು ಕಟು ಶಬ್ದಗಳಿಂದ ಖಂಡಿಸಿ ಭಾರತ ಸರಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ವಿವರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆ ಯಲ್ಲಿ ಇಂದು ನಮ್ಮ ಭದ್ರತಾ ಪಡೆಯ ಶೂರ ಯೋಧರ ಮೇಲೆ ನಡೆದ ಹೇಡಿತನದ ಉಗ್ರರ ದಾಳಿಯನ್ನು ಸಾಧ್ಯ ವಿರುವ ಎಲ್ಲ ಕಠಿಣ ಪದಗಳಿಂದ ಭಾರತ ಸರಕಾರ ಖಂಡಿಸುತ್ತದೆ. ಇದೊಂದು ಹೀನಾತಿಹೀನ ಕೃತ್ಯವಾಗಿದ್ದು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಭಯೋ ತ್ಪಾದಕ ಸಂಘಟನೆ ಕೃತ್ಯವಾಗಿದೆ.

ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರ್ ನೇತೃತ್ವದ ಭಯೋತ್ಪಾದಕ ಸಂಘಟನೆ ಇದಾಗಿದೆ. ಈತನಿಗೆ ಪಾಕಿಸ್ತಾನ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಎಲ್ಲೆಡೆ ಮುಕ್ತವಾಗಿ ಓಡಾಡಿಕೊಂಡಿದ್ದಾನೆ. ತನ್ನ ನೆಲದಿಂದ ಭಯೋತ್ಪಾದಕ ಕೃತ್ಯಗಳನ್ನು ಪ್ರಾಯೋಜಿಸುತ್ತಿರುವ ಈತ ಹಾಗೂ ಇತರ ಉಗ್ರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳದಿದ್ದಲ್ಲಿ ದಂಡಿಸುವ ಸಂಪೂರ್ಣ ಅಧಿಕಾರ ಭಾರತಕ್ಕಿದೆ. ದೇಶದ ಭದ್ರತೆ ಕಾಪಾಡಲು ಭಾರತ ಸರಕಾರ ಸಂಪೂರ್ಣ ಬದ್ಧವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಭಯೋತ್ಪಾದನೆ ಪಿಡುಗಿನ ವಿರುದ್ಧ ಸಮರದಲ್ಲಿ ನಮ್ಮ ನಿರ್ಣಯ ಅಚಲವಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ, ಸಮರ್ಥನೆ, ಪ್ರಾಯೋಜಕತ್ವ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಭಯೋತ್ಪಾದಕ ಜಾಲಗಳನ್ನು ಸಂಪೂರ್ಣ ನಾಶಪಡಿಸಬೇಕು. ಎಲ್ಲ ದೇಶಗಳೂ ವಿಶ್ವಸಂಸ್ಥೆಯ ನಿರ್ಣಯದಂತೆ ಜೈಷ್ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕು ಎಂದು ನಾವು ಮತ್ತೊಮ್ಮೆ ಬಲವಾಗಿ ಆಗ್ರಹಿಸುತ್ತೇವೆ. ದೇಶದ ರಕ್ಷಣೆಗಾಗಿ ಸರ್ವೋಚ್ಛ ಬಲಿದಾನ ಮಾಡಿದ ವೀರ ಯೋಧರನ್ನು ನಾವು ಗೌರವಪೂರ್ವಕವಾಗಿ ನೆನೆಯುತ್ತೇವೆ. ಅವರ ದುಃಖತಪ್ತ ಕುಟುಂಬಗಳ ಬೆಂಬಲಕ್ಕೆ ನಿಲ್ಲುತ್ತೇವೆ.

Translate »