ಮಂಡ್ಯ ಯೋಧ ಹುತಾತ್ಮ
ಮಂಡ್ಯ, ಮೈಸೂರು

ಮಂಡ್ಯ ಯೋಧ ಹುತಾತ್ಮ

February 15, 2019

ಭಾರತೀನಗರ: ಜಮ್ಮು-ಕಾಶ್ಮೀರದಲ್ಲಿ ಇಂದು ಮಧ್ಯಾಹ್ನ ನಡೆದ ಉಗ್ರರ ದಾಳಿಗೆ ಮಂಡ್ಯ ಜಿಲ್ಲೆಯ ಯೋಧ ನೋರ್ವ ಹುತಾತ್ಮನಾಗಿದ್ದಾನೆ ಎಂದು ವರದಿಯಾಗಿದೆ.

ಮದ್ದೂರು ತಾಲೂಕು ಭಾರತೀ ನಗರ ಸಮೀಪದ ಗುಡಿಗೆರೆ ಗ್ರಾಮದ ಪೊನ್ನಯ್ಯ ಮತ್ತು ಚಿಕ್ಕೋಳಮ್ಮ ದಂಪತಿ ಪುತ್ರ ಹೆಚ್. ಗುರು (33) ಹುತಾತ್ಮರಾದ ಯೋಧರಾಗಿದ್ದು, ಇವರು ರಜೆಗಾಗಿ ಗ್ರಾಮಕ್ಕೆ ಬಂದಿದ್ದು, ಕಳೆದ ವಾರವಷ್ಟೇ ಕರ್ತವ್ಯಕ್ಕೆ ಹಿಂತಿರುಗಿದ್ದರು ಎಂದು ಹೇಳಲಾಗಿದೆ.

ಹುತಾತ್ಮ ಗುರು ಕಳೆದ ಆರು ತಿಂಗಳ ಹಿಂದೆಯಷ್ಟೇ ಸಾತನೂರು ಬಳಿಯ ಸಾಸಲಪುರ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಮಂಡ್ಯ ಜಿಲ್ಲೆಯ ಯೋಧ ಉಗ್ರರ ದಾಳಿಯಲ್ಲಿ ಹುತಾತ್ಮನಾಗಿರುವ ವಿಚಾರ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಆತನ ಸ್ವಗ್ರಾಮ ಗುಡಿಗೆರೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಆತನ ಸ್ನೇಹಿತರು ಮತ್ತು ಕುಟುಂಬದವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಜಿಲ್ಲೆಯ ಹಲವೆಡೆ ಹುತಾತ್ಮ ಯೋಧನ ಭಾವಚಿತ್ರವನ್ನಿಟ್ಟು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಹುತಾತ್ಮರಾದ ಯೋಧರ ಪಟ್ಟಿಯಲ್ಲಿ ಮಂಡ್ಯದ ಹೆಚ್.ಗುರು ಹೆಸರಿದೆ. ಆದರೆ ಅವರು ಹುತಾತ್ಮರಾಗಿರುವ ಬಗ್ಗೆ ಮಂಡ್ಯ ಜಿಲ್ಲಾಡಳಿ ತಕ್ಕಾಗಲೀ, ಪೊಲೀಸ್ ಇಲಾಖೆಗಾಗಲೀ ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲ.

ಭಾರತೀನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅಯ್ಯನಗೌಡ ಅವರು ಗುಡಿಗೆರೆ ಗ್ರಾಮದ ಯೋಧನ ನಿವಾಸಕ್ಕೆ ಬಂದಿದ್ದರಾದರೂ, ಅವರೂ ಸಹ ಗುರು ಹುತಾತ್ಮರಾಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ.

Translate »