ಹುತಾತ್ಮರಾದ ಭಾರತದ 44 ವೀರ ಯೋಧರು
ಮೈಸೂರು

ಹುತಾತ್ಮರಾದ ಭಾರತದ 44 ವೀರ ಯೋಧರು

February 15, 2019

ಶ್ರೀನಗರ: ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯಲ್ಲಿ 44 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದಾರೆ. 30ಕ್ಕೂ ಹೆಚ್ಚು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ 18 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ 3.30ರ ಸುಮಾರಿನಲ್ಲಿ ರಜೆ ಮುಗಿಸಿ ಕೊಂಡು ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ ಕೇವಲ 20 ಕಿ.ಮೀ. ಅಂತರವಿದ್ದಾಗ ಹೆದ್ದಾರಿ ಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ 350 ಕೆ.ಜಿ. ಸುಧಾ ರಿತ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರವಾದಿ, ಕಾರನ್ನು ಯೋಧರ ಬಸ್ಸಿಗೆ ಡಿಕ್ಕಿ ಹೊಡೆಸಿದ್ದಾನೆ. ಸ್ಫೋಟಕ ತುಂಬಿದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಯೋಧರಿದ್ದ ಬಸ್ ಸ್ಫೋಟಗೊಂಡಿದೆ. ಬಸ್ಸಿನಲ್ಲಿದ್ದ ಯೋಧರ ದೇಹಗಳು ಛಿದ್ರಗೊಂಡು, ಹೈವೇಯಿಂದ ಸುಮಾರು 100 ಮೀ. ದೂರಕ್ಕೆ ಸಿಡಿದು ಬಿದ್ದಿರುವುದು ಕಂಡು ಬಂದಿದೆ. ಹಲವಾರು ಯೋಧರ ದೇಹಗಳು ಛಿದ್ರಗೊಂಡಿವೆ.

ಆತ್ಮಾಹುತಿ ದಾಳಿಕೋರ ಕಾರನ್ನು ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ತಕ್ಷಣ ಅದರ ಹಿಂದೆಯೇ ಬಂದ ವಾಹನಗಳಲ್ಲಿದ್ದ ಉಗ್ರರು ಅಲ್ಲಿದ್ದ ಸೇನಾ ಬಸ್‍ಗಳ ಮೇಲೆ ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ. ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಯಾದ ಜೈಶ್-ಎ-ಮಹಮ್ಮದ್ ಈ ಕೃತ್ಯದ ಹೊಣೆ ಹೊತ್ತಿದೆ. ಸ್ಫೋಟಕ ತುಂಬಿದ ಕಾರನ್ನು ಯೋಧರ ವಾಹನಕ್ಕೆ ಡಿಕ್ಕಿ ಹೊಡೆಸಿದ ಉಗ್ರವಾದಿ ಆದಿಲ್ ಅಹಮ್ಮದ್ ದಾರ್ ಅಲಿಯಾಸ್ ವಾಕಾಸ್ ಅಲಿಯಾಸ್ ಕಮಾಂಡೋ ಎಂಬಾತ ಈ ದಾಳಿಗೂ ಮುನ್ನ ಮಾತನಾಡಿರುವ ವೀಡಿಯೋವನ್ನು ಉಗ್ರ ಸಂಘಟನೆ ಬಿಡುಗಡೆ ಮಾಡಿದೆ. ತಾನು ದಾಳಿ ನಡೆಸುವ ಮುನ್ನ ಕೊನೆಯದಾಗಿ ಮಾತನಾಡಿರುವ ಆತ, ಕಳೆದ ಒಂದು ವರ್ಷದಿಂದ ತಾನು ಜೈಶ್-ಎ-ಮಹಮ್ಮದ್ ಸಂಘಟನೆಯಲ್ಲಿ ಇರುವುದಾಗಿ ಹೇಳಿಕೊಂಡಿದ್ದು, ಕಾಶ್ಮೀರದ ಜನರಿಗೆ ತನ್ನ ಕೊನೆಯ ಸಂದೇಶ ಇದು ಎಂದು ಹೇಳಿದ್ದಾನೆ.

ಜೈಶ್-ಎ-ಮಹಮ್ಮದ್ ಸಂಘಟನೆಯು ಈ ಹಿಂದೆ ಐಸಿಎ-18 ವಿಮಾನ ಹೈಜಾಕ್, 2001ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ, ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿತ್ತು ಎಂದು ತಿಳಿಸಿರುವ ಆತ, ನಮ್ಮ ಸಂಘಟನೆಯ ಕೆಲವು ಕಮಾಂಡರ್‍ಗಳನ್ನು ಕೊಂದುಬಿಟ್ಟರೆ ನೀವು (ಭಾರತ ಸೇನೆ) ನಮ್ಮನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಲ್ಲದೇ, ದಕ್ಷಿಣ ಕಾಶ್ಮೀರದ ಜನರು ಭಾರತದ ವಿರುದ್ಧ ಹೋರಾಡಬೇಕು. ಅಲ್ಲದೇ ಉತ್ತರ ಮತ್ತು ಕೇಂದ್ರ ಕಾಶ್ಮೀರದ ಜನರು ಅದೇ ರೀತಿ ಜಮ್ಮುವಿನ ಜನರ ಜೊತೆಯಾಗಲು ಈಗ ಸಮಯ ಬಂದಿದೆ ಎಂದು ಹೇಳಿರುವ ಆತ, ಈ ವೀಡಿಯೋ ನೀವು ನೋಡುವಾಗ ನಾನು ಇರುವುದಿಲ್ಲ ಎಂದು ತಿಳಿಸಿದ್ದಾನೆ.

ಭಾರತೀಯ ಯೋಧರ ಮೇಲೆ ಉಗ್ರರ ದಾಳಿ ನಡೆಯುತ್ತಿದ್ದಂತೆಯೇ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ. ಭಾರತವು ಕಟು ಮಾತುಗಳಿಂದ ಈ ಕೃತ್ಯವನ್ನು ಖಂಡಿಸಿದ್ದು, ಉಗ್ರರಿಗೆ ಮರೆಯಲಾಗದ ಪಾಠ ಕಲಿಸುವ ಆಕ್ರೋಶದ ಸಂದೇಶ ರವಾನೆ ಮಾಡಿದೆ. `ಇದೊಂದು ಹೀನ ಕೃತ್ಯ. ನಮ್ಮ ಕೆಚ್ಚೆದೆಯ ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಉಗ್ರರಿಗೆ ತಕ್ಕ ಶಾಸ್ತಿ ಮಾಡಿಯೇ ತೀರುತ್ತೇವೆ. ಇಡೀ ದೇಶ ಹುತಾತ್ಮ ಯೋಧರ ಕುಟುಂಬಕ್ಕೆ ಹೆಗಲು ಕೊಟ್ಟು ನಿಲ್ಲುತ್ತದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಕೇಂದ್ರ ಗೃಹ ಸಚಿವ ರಾಜಾನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಧೋವಲ್, ಜಮ್ಮು-ಕಾಶ್ಮೀರ ರಾಜ್ಯಪಾಲರ ಸಲಹೆಗಾರರಾಗಿರುವ ಕೆ.ವಿಜಯ ಕುಮಾರ್, ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಂದ ಮಾಹಿತಿ ಪಡೆದು ಈ ಸಂಬಂಧ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ಕೃತ್ಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಾಳೆ ಬೆಳಿಗ್ಗೆ 9 ಗಂಟೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನೆಯ ಎಲ್ಲಾ ವಿಭಾಗದ ಮುಖ್ಯಸ್ಥರ ಸಭೆ ಕರೆದಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ಅವರೂ ಕೂಡ ಸೇನಾ ಮುಖ್ಯಸ್ಥರಿಂದ ಮಾಹಿತಿ ಪಡೆಯುತ್ತಿದ್ದಾರೆ. ಉಗ್ರರ ಈ ಕೃತ್ಯಕ್ಕೆ ಪ್ರತೀಕಾರವಾಗಿ ಸದ್ಯದಲ್ಲೇ ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
.

Translate »