ಫೆಬ್ರವರಿ 14ರಂದು ಪುಲ್ವಾಮ ಉಗ್ರ ದಾಳಿಗೆ ಉಗ್ರರು ಬಳಕೆ ಮಾಡಿದ್ದ ಕಾರಿನ ಮಾಲೀಕ ಇದೀಗ ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರ್ಪಡೆ ಯಾಗಿದ್ದಾನೆ ಎಂದು ತಿಳಿದುಬಂದಿದೆ. ಅನಂತ್‍ನಾಗ್ ಜಿಲ್ಲೆಯ ಬಿಜ್ಬೆರಾ ನಿವಾಸಿ ಸಜ್ಜದ್ ಭಟ್ ಎಂಬಾತ ಇದೀಗ ಜೈಷ್ ಇ ಉಗ್ರ ಸಂಘಟನೆ ಸೇರ್ಪಡೆಯಾಗಿದ್ದು, ಈತನೇ ಪುಲ್ವಾಮ ಉಗ್ರ ದಾಳಿಗೆ ಬಳಕೆಯಾದ ಮಾರುತಿ ಈಕೋ ವಾಹನ ಮಾಲೀಕ ಎಂದು ತಿಳಿದುಬಂದಿದೆ. ಪ್ರಸ್ತುತ ಪುಲ್ವಾಮ ಉಗ್ರ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಡೆಸುತ್ತಿದ್ದು, ಎನ್‍ಐಎ ಮೂಲಗಳೇ ಸಜ್ಜದ್ ಭಟ್ ಜೈಶ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂದು ಹೇಳಿವೆ. ಅಲ್ಲದೆ ಸ್ವತಃ ಸಜ್ಜದ್ ಭಟ್ ಎಕೆ 47 ಗನ್ ಹಿಡಿದು ನಿಂತಿರುವ ಫೆÇೀಟೋ ಕೂಡ ಆತನ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದ್ದು, ಇದೂ ಕೂಡ ಆತ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂಬ ಅಂಶಕ್ಕೆ ಪುಷ್ಟಿ ನೀಡಿವೆ. ಕಳೆದ ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮದಲ್ಲಿ ಶ್ರೀನಗರದಿಂದ ಗಡಿಗೆ ತೆರಳುತ್ತಿದ್ದ ಸೇನಾಪಡೆಗಳ ವಾಹನಗಳ ಮೇಲೆ ಬಾಂಬ್ ತುಂಬಿದ್ದ ಮಾರುತಿ ಈಕೋ ವಾಹನವನ್ನು ನುಗ್ಗಿಸಿ ಸ್ಫೋಟಗೊಳಿಸಲಾಗಿತ್ತು.