ಮಂಡ್ಯ ವೀರ ಯೋಧನಿಗೆ ಭಾವಪೂರ್ಣ ವಿದಾಯ
ಮೈಸೂರು

ಮಂಡ್ಯ ವೀರ ಯೋಧನಿಗೆ ಭಾವಪೂರ್ಣ ವಿದಾಯ

February 17, 2019

ಹುಟೂರಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಗುರು ಚಿತೆಗೆ ಸಹೋದರನಿಂದ ಅಗ್ನಿಸ್ಪರ್ಶ

ಭಾರತೀನಗರ: ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಿಂದ ಹುತಾತ್ಮನಾದ ಮಂಡ್ಯದ ವೀರ ಯೋಧ ಎಚ್. ಗುರು ಅವರಿಗೆ ಸ್ವಗ್ರಾಮವಾದ ತಾಲೂಕಿನ ಗುಡಿಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ‘ ಬೋಲೋ ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’, ‘ವೀರ ಯೋಧ ಗುರು ಅಮರ್ ರಹೇ’ ಮುಗಿಲು ಮುಟ್ಟುವ ಘೋಷಣೆಗಳ ನಡುವೆ ಭಾವಪೂರ್ಣ ವಿದಾಯ ಹೇಳಲಾಯಿತು.

ಸಂಜೆ 7.45ರ ಸುಮಾರಿನಲ್ಲಿ ಸೇನಾ ವಾಹನದಲ್ಲಿ ಗುಡಿಗೆರೆ ಗ್ರಾಮಕ್ಕೆ ಬಂದ ಯೋಧನ ಪಾರ್ಥಿವ ಶರೀರವನ್ನು ಮನೆ ಬಳಿ ಕೊಂಡೊಯ್ದಾಗ ಅವರ ಪತ್ನಿ ಕಲಾವತಿ ದುಃಖದ ನಡುವೆ ಸೆಲ್ಯೂಟ್ ಹೊಡೆ ಯುವ ಮೂಲಕ ಗೌರವಪೂರ್ವಕವಾಗಿ ಭಾರವಾದ ಹೃದಯದೊಂದಿಗೆ ಬರಮಾಡಿಕೊಂಡರು. ಸ್ವಲ್ಪ ಸಮಯ ಮನೆಯ ಮುಂದೆ ಪಾರ್ಥಿವ ಶರೀರವನ್ನು ಇಟ್ಟು, ಅಂತಿಮ ವಿಧಿ ವಿಧಾನಗಳಿಗೆ ಕುಟುಂಬದ ವರಿಗೆ ಅವಕಾಶ ಮಾಡಿಕೊಡಲಾಯಿತು. ನಂತರ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿರುವ ಕೆ.ಎಂ. ದೊಡ್ಡಿ ಬಳಿ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದ್ದ ಸ್ಥಳಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು.

ಮಂಡ್ಯದ ವೀರ ಯೋಧನಿಗೆ ಅಂತಿಮ ವಿದಾಯ ಹೇಳಲು ಮಠಾಧಿಪತಿಗಳು, ರಾಜಕಾರಣಿಗಳು ಸೇರಿ ದಂತೆ ಸಾವಿರಾರು ಮಂದಿ ಜಮಾಯಿಸಿದ್ದರು. ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಪರವಾಗಿ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ರಾಜ್ಯ ಪೊಲೀಸ್ ಪಡೆ ಮತ್ತು ಸಿಆರ್‍ಪಿಎಫ್‍ನಿಂದ ಪ್ರತ್ಯೇಕವಾಗಿ ಆಗಸದೆಡೆಗೆ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅಂತಿಮ ಗೌರವ ಸಲ್ಲಿಸಲಾಯಿತು. ಕೊನೆಯಲ್ಲಿ ಸಿಆರ್‍ಪಿಎಫ್ ಅಧಿಕಾರಿಗಳು ವೀರ ಯೋಧನ ಶವಪೆಟ್ಟಿಗೆ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಗಳಿಗೆ ನೀಡಿದರು. ಆ ಧ್ವಜ ಮತ್ತು ಸರ್ಕಾರದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹುತಾತ್ಮ ಯೋಧ ಹೆಚ್.ಗುರು ಪತ್ನಿ ಕಲಾವತಿ ಅವರಿಗೆ ಮುಖ್ಯಮಂತ್ರಿ ಗಳು ಹಸ್ತಾಂತರಿಸಿ, ಸಾಂತ್ವನ ಹೇಳಿದರು.

ಹುತಾತ್ಮ ಯೋಧನಿಗೆ ಸರ್ಕಾರಿ ಗೌರವ ಸಲ್ಲಿಸಿದ ನಂತರ ಕುಟುಂಬಸ್ಥರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಯಿತು. ಸಿಮೆಂಟ್ ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದ 6×9 ಅಡಿ ವಿಸ್ತೀರ್ಣದ ವೇದಿಕೆ ಮೇಲೆ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಯನ್ನು ಇಟ್ಟನಂತರ ಆತನ ಕುಟುಂಬದವರು ಅಂತಿಮ ನಮನ ಸಲ್ಲಿಸಿದರು. ಈ ವೇಳೆಯಲ್ಲೂ ಆತನ ಪತ್ನಿ ಕಲಾವತಿ ಸೆಲ್ಯೂಟ್ ಹೊಡೆಯುವ ಮೂಲಕ ಪತಿಗೆ ಅಂತಿಮ ವಿದಾಯ ಹೇಳಿದರು. ಈ ದೃಶ್ಯ ನೆರೆದವರಲ್ಲಿ ಕಣ್ಣೀರು ಬರಿಸಿತು. ಹುತಾತ್ಮ ಯೋಧ ಹೆಚ್. ಗುರು ಅವರ ಸಹೋದರ ಮಧು ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಂತ್ಯಕ್ರಿಯೆಯು ಮಡಿವಾಳ ಸಮುದಾಯದ ವಿಧಿ ವಿಧಾನಗಳಂತೆ ನೆರವೇರಿತು.

ಹುತಾತ್ಮ ಯೋಧನ ಅಂತ್ಯಸಂಸ್ಕಾರದ ವೇಳೆ ನೆರೆದಿದ್ದ ಸಾವಿರಾರು ಮಂದಿ ‘ಬೋಲೋ ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’, ‘ವೀರ ಯೋಧ ಗುರು ಅಮರ್ ರಹೇ’ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂತ್ಯ ಸಂಸ್ಕಾರದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಚಿವರು ಗಳಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್, ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಎನ್. ಚಲುವರಾಯ ಸ್ವಾಮಿ, ಶಾಸಕ ಎಲ್. ನಾಗೇಂದ್ರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಚಿತ್ರನಟ ನಿಖಿಲ್ ಕುಮಾರಸ್ವಾಮಿ, ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು, ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ, ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ, ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್, ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ವೀರ ಯೋಧನಿಗೆ ಹಾದಿಯುದ್ದಕ್ಕೂ ಲಕ್ಷಾಂತರ ನಮನ: ಇದಕ್ಕೂ ಮುನ್ನಾ ಇಂದು ಮಧ್ಯಾಹ್ನ ತಮಿಳುನಾಡಿನ ತಿರುಚ್ಚಿಯಿಂದ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಯಿತು. ನಂತರ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಯಿತು. ಹುತಾತ್ಮ ಯೋಧನ ಹೊತ್ತಿದ್ದ ಸೇನಾ ವಾಹನ ಸಂಚಾರಕ್ಕೆ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲಾಗಿತ್ತಾದರೂ, ಮಾರ್ಗದುದ್ದಕ್ಕೂ ಸಾರ್ವಜನಿಕರು ನೆರೆದಿದ್ದು, ಪೊಲೀಸ್ ಭದ್ರತೆಯನ್ನೂ ಮೀರಿ ಹುತಾತ್ಮ ಯೋಧನ ಹೊತ್ತಿದ್ದ ವಾಹನಕ್ಕೆ ಪುಷ್ಪವರ್ಷಗರೆ ಯುವ ಮೂಲಕ ಅಂತಿಮ ಗೌರವ ಸಲ್ಲಿಸಿದರು. ಹಲವಾರು ಯುವಕರು ಸೇನಾ ವಾಹನದ ಮುಂದೆ ಬೈಕ್‍ನಲ್ಲಿ ಸಾಗಿದರು. ಮಾರ್ಗದುದ್ದಕ್ಕೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸುತ್ತಿದ್ದ ಕಾರಣ ಸೇನಾ ವಾಹನ ನಿಧಾನ ಗತಿಯಲ್ಲಿಯೇ ಚಲಿಸಬೇಕಾಯಿತು. ಪಾರ್ಥಿವ ಶರೀರವು ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟಗೆ ಬರುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಜಿಲ್ಲಾಧಿಕಾರಿ ಮಂಜುಶ್ರೀ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರು ಬರಮಾಡಿಕೊಂಡರು. ನೆರೆದಿದ್ದ ಸಾವಿರಾಜು ಮಂದಿ ಸೇನಾ ವಾಹನದ ಮುಂದೆ ದ್ವಿಚಕ್ರ ವಾಹನಗಳು ಮತ್ತು ಕಾಲ್ನಡಿಗೆಯೊಂದಿಗೆ ತ್ರಿವರ್ಣ ಧ್ವಜ ಹಿಡಿದು ಹುತಾತ್ಮ ಯೋಧನಿಗೆ ಜಯಕಾರ ಮೊಳಗುತ್ತಾ, ಸ್ವಗ್ರಾಮಕ್ಕೆ ತೆರಳಿದರು.

Translate »