ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ  ಪಾದ ಪೂಜೆ: ದಸಂಸ ಅಭಿನಂದನೆ
ಮೈಸೂರು

ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದ ಪೂಜೆ: ದಸಂಸ ಅಭಿನಂದನೆ

February 26, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕುಂಭಮೇಳದಲ್ಲಿ ಸ್ವಚ್ಛತೆ ಕಾಪಾಡಿದ ಪೌರಕಾರ್ಮಿಕರ ಪಾದ ತೊಳೆದು, ಗೌರವಿಸಿದ ಸಂಗತಿ, ಶೋಷಿತ ಸಮುದಾಯದವರ ಆತ್ಮಗೌರವ ಹೆಚ್ಚಿಸಿದೆ ಎಂದು ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಭಿಪ್ರಾಯಿಸಿದೆ. ಶತಮಾನಗಳಿಂದ ಜಾತಿ, ಅಸ್ಪøಶ್ಯತೆ ಸಂಕೋಲೆಗಳಲ್ಲಿ ಸಿಲುಕಿ ಅವಮಾನ ಅನುಭವಿಸಿರುವ ಹಾಗೂ ಹಂಗಿನ ಜೀವನ ನಡೆಸುತ್ತಿರುವ ದೇಶದ ದಲಿತ ಸಮುದಾಯದಲ್ಲಿ, ಪ್ರಧಾನಿ ಮೋದಿ ಅವರ ಈ ಒಂದು ಕಾರ್ಯ ರೋಮಾಂಚನ ಉಂಟು ಮಾಡಿದೆ. ಪೌರಕಾರ್ಮಿಕರ ಪಾದ ತೊಳೆದು, ಪೂಜೆ ಮಾಡಿರುವುದು 12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕಾಳಜಿಯನ್ನು ನೆನಪಿಸುತ್ತದೆ. ಈ ಸಂಗತಿಯನ್ನು ರಾಜಕೀಯ ವಲಯದಲ್ಲಿ ಯಾವ ರೀತಿಯಲ್ಲಿ ಟೀಕಿಸಿ ದರೂ, ದಲಿತ ಸಮುದಾಯ ಪ್ರಧಾನಿಯವರ ಮನಃಸ್ಥಿತಿಯನ್ನು ಒಪ್ಪಲೇಬೇಕಿದೆ. ಅಸ್ಪøಶ್ಯತೆ, ಅಸಮಾನತೆಯುಳ್ಳ ಸಾಮಾಜಿಕ ವ್ಯವಸ್ಥೆಯನ್ನು ಹಲವಾರು ದಾರ್ಶನಿಕರು ವಿರೋಧಿಸಿದ್ದಾರೆ. ಆದರೆ ಮೋದಿ ಅವರ ಕಾರ್ಯ ನಿಜಕ್ಕೂ ಎಲ್ಲರಿಗೂ ಆತ್ಮಸ್ಥೈರ್ಯ ತುಂಬಿದೆ. ಸಮಾನತೆಯನ್ನು ಹಂಬಲಿಸುತ್ತಿರುವ ದಲಿತ ಸಮುದಾಯದ ಆತ್ಮಗೌರವ ಹೆಚ್ಚಿದಂತಾಗಿದೆ. ದಲಿತರ ಅಭಿವೃದ್ಧಿ ಕೇವಲ ರಾಜಕಾರಣಿಗಳ ಭಾಷಣಕ್ಕೆ ಸೀಮಿತಗೊಳಿ ಸದೆ ನಿಜವಾಗಿ ಹಾಗೇ ನಡೆದುಕೊಳ್ಳುವ ನಾಯರನ್ನು ಸಮುದಾಯ ಬಯಸಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪೌರಕಾರ್ಮಿಕರ ಪಾದ ತೊಳೆದು, ಗೌರವಿಸಿರುವುದು ಮಹತ್ವದ ಸಂಗತಿಯಾಗಿದೆ. ಇಡೀ ದೇಶ, ಅದರಲ್ಲೂ ದಲಿತ ಸಮಾಜ ಒಪ್ಪು, ಮೆಚ್ಚುವ, ಆತ್ಮಗೌರವ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ. ಹಾಗಾಗಿ ಮೋದಿ ಅವರನ್ನು ಜಿಲ್ಲಾ ದಸಂಸ ಅಭಿನಂದಿಸುತ್ತದೆ ಎಂದು ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ, ಉಪ ಪ್ರಧಾನ ಸಂಚಾಲಕ ಹೆಚ್.ಬಿ.ದಿವಾಕರ್, ಮುಖಂಡರಾದ ಚಾಮರಾಜು, ಕೆ.ನಂಜಪ್ಪ, ವೆಂಕಟೇಶ ಹಾಗೂ ಪುಟ್ಟಲಕ್ಷ್ಮಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೌರಕಾರ್ಮಿಕರ ಆತ್ಮಗೌರವ ಹೆಚ್ಚಿಸಿರುವ ಮೋದಿ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಮಾನ ವೇತನ ಸಿಗುವಂತೆ ಕಾನೂನು ತರಬೇಕೆಂದೂ ಆಗ್ರಹಿಸಿದ್ದಾರೆ.

Translate »