ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಉಮೇದುವಾರಿಕೆ ಸಲ್ಲಿಕೆ
ಚಾಮರಾಜನಗರ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಉಮೇದುವಾರಿಕೆ ಸಲ್ಲಿಕೆ

March 25, 2019
  • ಮನೆ ದೇವರು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ
  • ಬೃಹತ್ ಮೆರವಣಿಗೆ
  • ಜೊತೆ ಜೊತೆಯಲ್ಲಿ ಹಾರಾಡಿದ ಕಾಂಗ್ರೆಸ್-ಜೆಡಿಎಸ್ ಬಾವುಟ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ,
ಹಾಲಿ ಸಂಸದ ಆರ್.ಧ್ರುವನಾರಾಯಣ್ ಸೋಮವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ರಾದ ಆರ್.ನರೇಂದ್ರ, ಯತೀಂದ್ರ ಸಿದ್ದರಾಮಯ್ಯ ಹಾಗೂ ಅನಿಲ್ ಚಿಕ್ಕಮಾದು ಅವರೊಂದಿಗೆ ಆಗಮಿಸಿದ ಧ್ರುವನಾರಾಯಣ್ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ 2 ಸೆಟ್ ಉಮೇದು ವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಧ್ರುವ ನಾರಾಯಣ್ ತಮ್ಮ ಮನೆ ದೇವರು ಯಳಂದೂರು ತಾಲೂಕಿನ ಬಿಳಿಗಿರಿ ರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಚಾಮರಾಜನಗರಕ್ಕೆ ಆಗಮಿಸಿ ತಾರಾನಾಥ ಬೌದ್ಧ ವಿಹಾರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ತದ ನಂತರ ಇತಿಹಾಸ ಪ್ರಸಿದ್ಧ ಕೊಳದ ಗಣಪತಿ ಮತ್ತು ಶ್ರೀ ಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಭಾರೀ ಮೆರವಣಿಗೆ: ಶ್ರೀಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ವರೆಗೆ ಆರ್.ಧ್ರುವನಾರಾಯಣ್ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್. ನರೇಂದ್ರ, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಶಿವಮ್ಮ, ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು ಇತರರು ತೆರೆದ ವಾಹನ ದಲ್ಲಿ ಧ್ರುವನಾರಾಯಣ್ ಅವರಿಗೆ ಸಾಥ್ ನೀಡಿದರು. ಈ ವೇಳೆ ಇವರೆಲ್ಲರೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಕೈ ಮುಗಿದು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಬಳಿಯಿಂದ ಕಾಲ್ನಡಿಗೆಯಲ್ಲಿ ಜಿಲ್ಲಾಧಿ ಕಾರಿ ಕಚೇರಿಗೆ ತೆರಳಿದ ಧ್ರುವನಾರಾಯಣ್, ಭವನದ ಮುಖ್ಯ ದ್ವಾರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಕೈ ಮುಗಿದು ಗೌರವ ಸೂಚಿಸಿದರು. ನಂತರ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ 2 ಸೆಟ್ ಉಮೇದುವಾರಿಕೆ ಸಲ್ಲಿಸಿ, ನಂತರ ರಾಮಸಮುದ್ರಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿ ಗೌರವ ಸೂಚಿಸಿದರು.

ಕೇರಳದ ಚೆಂಡೆ, ಮಂಗಳವಾದ್ಯ, ಬ್ಯಾಂಡ್‍ಸೆಟ್, ಕಲಾತಂಡಗಳು ಮೆರ ವಣಿಗೆಗೆ ಶೋಭೆ ತಂದವು. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸಾವಿರಾರು ಮುಖಂಡರು, ಕಾರ್ಯಕರ್ತರು ಉರಿ ಬಿಸಿಲನ್ನು ಲೆಕ್ಕಿಸದೆ ಪಕ್ಷದ ಬಾವುಟವನ್ನು ಹಿಡಿದು ಮೆರವಣಿಗೆ ಯಲ್ಲಿ ಸಾಗಿ ಬಂದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಧ್ವಜಗಳು ಒಟ್ಟಿಗೆ ಹಾರಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಚಾಮುಲ್ ನಿರ್ದೇಶಕ ಹೆಚ್.ಎಸ್.ನಂಜುಂಡ ಪ್ರಸಾದ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜ್, ಜೆಡಿಎಸ್ ಮುಖಂಡರಾದ ಸಿ.ಎಂ.ಕೃಷ್ಣ ಮೂರ್ತಿ, ಮಹೇಶ್‍ಗೌಡ, ಜಿಪಂ ಸದಸ್ಯ ರಾದ ಕೆ.ಪಿ.ಸದಾಶಿವಮೂರ್ತಿ, ಕೆರಹಳ್ಳಿ ನವೀನ್, ಬಸವರಾಜು, ಪಕ್ಷದ ವೀಕ್ಷಕಿ ವಾಸಂತಿ ಶಿವಣ್ಣ, ಮುಖಂಡರಾದ ಹೆಚ್.ಸಿ. ಬಸವರಾಜು, ಬಿ.ಕೆ.ರವಿಕುಮಾರ್, ಆಲೂರು ರಾಜಶೇಖರ್, ಹೆಚ್.ಎಸ್.ನಂಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನ್ನ, ಗುರುಸ್ವಾಮಿ, ತೋಟೇಶ್, ಎಂ.ವಿ.ಚಂದ್ರು, ರಾಜಶೇಖರ್, ಮುನಿ ರಾಜು, ಕೆಂಪಯ್ಯ, ಈಶ್ವರ್, ಶಿವ ಕುಮಾರ್ ಸೇರಿದಂತೆ ಇತರರಿದ್ದರು.

Translate »